ಮೈಸೂರು: ಗೃಹಿಣಿಯ ಕತ್ತು ಹಿಸುಕಿ ಕೊಲೆಗೈದ ಘಟನೆ ಮೈಸೂರಿನ ಕುವೆಂಪು ನಗರದ ಜ್ಯೋತಿ ಕಾನ್ವೆಂಟ್ ಬಳಿ ಬುಧವಾರ ನಡೆದಿದೆ. ಮಂಜುಳಾ (41) ಕೊಲೆಯಾದವರು. ಶಾಲೆಗೆ ತೆರಳಿದ್ದ ಮಗಳು ಮನೆಗೆ ಹಿಂದಿರುಗಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಹೆಚ್.ಡಿ.ಕೋಟೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ವ್ಯವಸ್ಥಾಪಕರಾಗಿರುವ ನಾಗರಾಜ್ ಎಂಬವರ ಪತ್ನಿ ಮಂಜುಳಾ ಅವರ ಕುತ್ತಿಗೆಗೆ ಸ್ಕಾರ್ಫ್ನಿಂದ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
26 ವರ್ಷಗಳ ಹಿಂದೆ ಮಂಜುಳಾ ಹಾಗೂ ನಾಗರಾಜ್ ಮದುವೆ ಆಗಿತ್ತು. ದಂಪತಿಗೆ ಮಕ್ಕಳಿರಲಿಲ್ಲ. ಮೂರು ವರ್ಷದ ಅಣ್ಣನ ಮಗಳನ್ನು ದತ್ತು ಪಡೆದಿದ್ದರು. ಮಂಜುಳಾ ಕುತ್ತಿಗೆಯಲ್ಲಿ ಉಸಿರುಗಟ್ಟಿಸಿ ಕೊಂದಿರುವ ಕುರುಹುಗಳನ್ನು ಪೊಲೀಸರು ಕಂಡುಹಿಡಿದಿದ್ದಾರೆ.
ಸ್ಥಳಕ್ಕೆ ಕುವೆಂಪು ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಇದನ್ನೂ ಓದಿ: ಮಂಡ್ಯ: ಆಸ್ತಿಗಾಗಿ ಪತ್ನಿಯನ್ನೇ ಕೊಲೆಗೈದ ಪತಿ, ಪೊಲೀಸರೆದುರು ಹೇಳಿದ್ದೇನು?