ಮೈಸೂರು : ಜ್ಯುಬಿಲಂಟ್ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಚಾಮರಾಜನಗರ ಮಾಜಿ ಸಂಸದ ಆರ್ ಧ್ರುವನಾರಾಯಣ ಒತ್ತಾಯಿಸಿದ್ದಾರೆ.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಜ್ಯುಬಿಲಂಟ್ ಔಷಧಿ ಕಾರ್ಖಾನೆಗೆ ಕಂಟೈನರ್ ಬಂದಿದ್ದರಿಂದ ಈ ರೀತಿ ಆಗಿದೆ ಎಂಬ ಕನ್ಫೂಸ್ ಆಗುತ್ತದೆ. ಇದರ ಬಗ್ಗೆ ಸಮಗ್ರ ವರದಿ ಬಂದಾಗ ಯಾವುದೇ ರಾಜಕೀಯ ಒತ್ತಡಕ್ಕೆ ಸರ್ಕಾರ ಮಣಿಯದೇ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಕೋವಿಡ್-19ನಿಂದ ಸಾರ್ವಜನಿಕರ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ದಿಢೀರ್ ಅಂತಾ ಜಿಲ್ಲಾ ಉಸ್ತುವಾರಿಗಳ ನೇಮಕ ಹಾಗೂ ಬದಲಾವಣೆ ಮಾಡುವುದು ಸರ್ಕಾರದ ಆಂತರಿಕ ಇಚ್ಛೆ. ಇದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲವೆಂದರು. ಕೋವಿಡ್-19ನಿಂದ ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೃಷಿಕರಿಗೆ ಅನಾನುಕೂಲ ತಪ್ಪಿಸಿ ವಾಹನ ಸಂಚಾರಕ್ಕೆ, ಕೃಷಿ ಉತ್ಪನ್ನ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಡಬೇಕು. ಮುಂಗಾರು ಮಳೆ ಆರಂಭವಾಗುತ್ತದೆ. ಬಿತ್ತನೆ ಬೀಜ ನೀಡಲು ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಎನ್‌ಎನ್‌ಆರ್‌ಇಜಿಎ)ಅಡಿ 6100 ಕೋಟಿ ರೂ.ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ನೀಡಿ ವ್ಯವಸ್ಥೆ ಮಾಡಿಬೇಕು ಎಂದು ಮನವಿ ಮಾಡಿದರು. ರಾಜಸ್ಥಾನ ಹಾಗೂ ಮಧ್ಯಪ್ರದೇಶ ಎಂಎನ್‌ಎನ್‌ಆರ್‌ಇಜಿಎ ಯೋಜನೆಯನ್ನ ಸಮರ್ಪಕವಾಗಿ ಬಳಸಿಕೊಂಡಿವೆ.
ಅದರಂತೆ ನಮ್ಮ ರಾಜ್ಯ ಸರ್ಕಾರ ಬಳಸಿಕೊಳ್ಳಬೇಕು. ಸಿಎಂ ಅವರು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಬೇಕು ಬ್ಯಾಕ್‌ಲಾಗ್ ಉದ್ಯೋಗಕ್ಕೆ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.