ಮೈಸೂರು: ನಗರದಲ್ಲಿ ಈಗಾಗಲೇ ಗುರುತಿಸಿರುವ ಕಂಟೈನ್ಮೆಂಟ್ ಝೋನ್, ಕ್ವಾರಂಟೈನ್ ಸೆಂಟರ್ ಹಾಗೂ ಹೋಂ ಕ್ವಾರಂಟೈನ್ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿದರೆ ನಗರಕ್ಕೆ ಸಂಭವಿಸುವ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ವಾರ್ಡ್‍ಗಳಲ್ಲಿ ಕೋವಿಡ್ ಪ್ರಕರಣಗಳನ್ನು ದಾಖಲಿಸುವಾಗ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಮುದಾಯದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಅಲ್ಲದೆ ಅಲ್ಲಿನ ಸಂಘಸಂಸ್ಥೆಗಳು, ನಿವಾಸಿಗಳ ಸಹಕಾರ ಪಡೆಯುವ ಮೂಲಕ ಕೆಲಸ ಮುಂದುವರೆಸಿ ಎಂದರು.
ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕು ಹೆಚ್ಚಾಗಿದ್ದು, ಹಾಸಿಗೆ ಕೊರತೆ ಉಂಟಾಗುವ ಸಂಭವವಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲಿ ಸೋಂಕಿತರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಬಹುದು. ಆದ್ದರಿಂದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚನೆ ಹೊರಡಿಸಿ. ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸಿ ಆಸ್ಪತ್ರೆಗೆ ದಾಖಲಿಸಲು ಒಪ್ಪದಿದ್ದಲ್ಲಿ ಅಂಥ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಸಿ ಎಂದು ತಿಳಿಸಿದರು.