ಮೈಸೂರು: ಮಾಧ್ಯಮಗಳಲ್ಲಿ ನಾವು ಸಂಪುಟ ವಿಸ್ತರಣೆಗೆ ಡೆಡ್ ಲೈನ್ ಕೊಟ್ಟಿದ್ದೇವೆಂದು ಪ್ರಸಾರವಾಗುತ್ತಿದೆ. ಆದ್ರೆ, ನಾವು ಯಾವುದೇ ಡೆಡ್ ಲೈನ್ ಕೊಟ್ಟಿಲ್ಲ, ಒಂದು ತಿಂಗಳು ಬಿಟ್ಟು ಸಂಪುಟ ವಿಸ್ತರಣೆ ಆದರೂ ನಮ್ಮಿಂದ ಯಾವುದೇ ತಕರಾರಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಇಂದು ತಮ್ಮ ಸ್ನೇಹಿತರೊಂದಿಗೆ ಚಾಮುಂಡಿಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸಚಿವ ಸಂಪುಟ ವಿಸ್ತರಣೆ ಈಗಲೇ ಆಗಬೇಕು ಎಂದು ಏನಿಲ್ಲ, 1 ತಿಂಗಳು ಬಿಟ್ಟು ವಿಸ್ತರಣೆ ಆದರೂ ನಮ್ಮದೇನು ಅಭ್ಯಂತರವಿಲ್ಲ ಎಂದರು. ಮಾಧ್ಯಮಗಳು ನಾವು ಡೆಡ್ ಲೈನ್ ಕೊಟ್ಟಿದ್ದೇವೆ ಎಂದು ಪ್ರಸಾರ ಮಾಡುತ್ತಿವೆ. ಆದ್ರೆ, ನಾವು ಸಚಿವ ಸಂಪುಟ ವಿಸ್ತರಣೆಗೆ ಸಿಎಂಗೆ ಯಾವುದೇ ಡೆಡ್ ಲೈನ್ ಕೊಟ್ಟಿಲ್ಲ ಎಂದರು.
ಇನ್ನೂ, ವಿಶ್ವನಾಥ್ ರಾಜೀನಾಮೆ ಕೊಟ್ಟಿದ್ದರಿಂದ ನಮಗೂ ಒಂದು ಶಕ್ತಿ ಬಂದಿದ್ದು, ಅವರು ಒಳ್ಳೆಯ ಲೀಡರ್ ಅವರಿಗೆ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದರು. ವಿಶ್ವನಾಥ್ ಅವರನ್ನು ಚುನಾವಣೆಗೆ ನಿಲ್ಲಬೇಡಿ ಎಂದು ಯಡಿಯೂರಪ್ಪ ಹೇಳಿದ್ದರೂ ಸಹ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಅವರನ್ನು ಮಂತ್ರಿ ಮಾಡಲು ಕೆಲವು ತೊಡಕುಗಳಿದ್ದು ತೊಡಕುಗಳ ನಿವಾರಣೆ ನಂತರ ಅವರಿಗೆ ಸ್ಥಾನಮಾನ ಸಿಗಲಿದೆಯೆಂದರು.
ಇನ್ನೂ ಸುಧಾಕರ್ ಮತ್ತು ಎಸ್.ಟಿ. ಸೋಮಶೇಖರ್ ಅಸಮಾಧಾನದ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವುದು ರೂಮರ್ಸ್ ಅಷ್ಟೇ, ಮಾಧ್ಯಮಗಳು ಸುಳ್ಳು ಪ್ರಚಾರ ಮಾಡುತ್ತವೆ ಎಂದರು. ನಾವು ದೇವರ ದರ್ಶನವನ್ನು ಪಡೆಯಲು ಬಂದಿದ್ದೇವೆ, ಈಗ ಯಾರನ್ನು ಭೇಟಿಯಾಗುವುದಿಲ್ಲ, ಯಡಿಯೂರಪ್ಪ ಅವರು ಮಾತು ಕೊಟ್ಟಿದ್ದಾರೆ ಅದರಂತೆ ಅವರು ನಡೆದುಕೊಳ್ಳುತ್ತಾರೆ ಇದರ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದರು.