ಮೈಸೂರು: ರೈತರ ಪ್ರತಿಭಟನೆಗೆ ನಮ್ಮ ವಿರೋಧ ಇಲ್ಲ. ಆದರೆ, ಟ್ರ್ಯಾಕ್ಟರ್ ರ‍್ಯಾಲಿ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೃಷಿ ಕಾಯ್ದೆ ವಿರೋಧಿಸಿ, ಬೆಂಗಳೂರಿನಲ್ಲಿ ರೈತ ಸಂಘಟನೆಗಳು ಕರೆ ನೀಡಿರುವ ಟ್ರ್ಯಾಕ್ಟರ್ ರ‍್ಯಾಲಿಗೆ ನಮ್ಮ ವಿರೋಧ ಇಲ್ಲ. ಆದರೆ, ರ‍್ಯಾಲಿ ಹೆಸರಿನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಬೆಂಗಳೂರಿನಲ್ಲಿ ಮೊದಲೇ ಜನ ಸಂದಣಿ ಹೆಚ್ಚು. ಏಕ ಕಾಲದಲ್ಲಿ ಸಾವಿರಾರು ಟ್ರ್ಯಾಕ್ಟರ್ಗಳು ರಸ್ತೆಗೆ ಇಳಿದರೆ ತೊಂದರೆ ಆಗುತ್ತದೆ. ಅದಕ್ಕೆ ಬದಲು ಸಾಂಕೇತಿಕವಾಗಿ 50 ಟ್ರ್ಯಾಕ್ಟರ್ಗಳನ್ನು ತಂದು ಮೆರವಣಿಗೆ ಮಾಡಿದರೆ ನಮ್ಮ ಅಭ್ಯಂತರ ಏನು ಇಲ್ಲ. ಜೊತೆಗೆ ಬೆಂಗಳೂರಿನಲ್ಲಿ ರ‍್ಯಾಲಿ ನಡೆಸಲು ಪೊಲೀಸ್ ಕಮಿಷನರ್ ಅನುಮತಿ ನೀಡಿಲ್ಲ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ರಾಜ್ಯ ಬಜೆಟ್ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋವಿಡ್ ಹಿನ್ನೆಲೆ ಬಜೆಟ್ ಗಾತ್ರ ಕಡಿಮೆ ಇರಲಿದೆ ಎಂದು ಸಿಎಂ ತಿಳಿದ್ದಾರೆ. ಕಳೆದ ಬಾರಿಗಿಂತ 25 ಸಾವಿರ ಕೋಟಿ ರೂ. ಹಣ ಕಡಿತಗೊಳ್ಳಲಿದೆ. ಇದರಲ್ಲಿಯೇ ಅಗತ್ಯವಿರುವ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಮೈಸೂರಿಗೆ ಮೂಲಭೂತವಾಗಿ ಅಗತ್ಯವಿರುವ ಬಗ್ಗೆ ಸ್ಥಳೀಯ ಸಂಸದರು, ಶಾಸಕರು ಜೊತೆ ಚರ್ಚೆ ಮಾಡುತ್ತೇನೆ. ಅಗತ್ಯವಿರುವಷ್ಟು ಅನುದಾನಕ್ಕಾಗಿ ಮೈಸೂರಿನ ಪ್ರತಿನಿಧಿಯಾಗಿ ಸಿಎಂಗೆ ಮನವಿ ಮಾಡುತ್ತೇನೆ ಎಂದರು.
ಇನ್ನು ಸಹಕಾರ ಇಲಾಖೆಗೆಗೂ ಅಗತ್ಯವಿರುವಷ್ಟು ಅನುದಾನದ ಬಗ್ಗೆ ಮನವಿ ಮಾಡುತ್ತೇವೆ. ಈಗ ಸಿಎಂ ಒಂದೊಂದೇ ಇಲಾಖೆಗಳ ಜತೆ ಸಭೆ ನಡೆಸುತ್ತಿದ್ದಾರೆ. ನಮ್ಮ ಸರದಿ ಬಂದಾಗ ಸಿಎಂ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.