ಮೈಸೂರು: ಸಂವಿಧಾನ ಬದಲಿಸಬೇಕೆಂದವರಿಗೆ ನಮ್ಮೂರಿಗೆ ಪ್ರವೇಶ ಇಲ್ಲ. ಆದ್ದರಿಂದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ನಮ್ಮೂರಿಗೆ ಬರಬಾರದು ಎಂದು ಗ್ರಾಮಸ್ಥರು ಪಟ್ಟು ಹಿಡಿದ ಘಟನೆ ಶುಕ್ರವಾರ ರಾತ್ರಿ ನಂಜನಗೂಡು ತಾಲೂಕಿನ ಬಿಳುಗಲಿ ಗ್ರಾಮದಲ್ಲಿ ನಡೆಯಿತು. ಗ್ರಾಮಸ್ಥರು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ವಿ ಸೋಮಣ್ಣ ಗ್ರಾಮಕ್ಕೆ ಭೇಟಿ ನೀಡದೇ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ವರುಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಿ.ಸೋಮಣ್ಣ ಪ್ರಚಾರ ಕೈಗೊಂಡಿದ್ದರು. ಆದರೆ ಗ್ರಾಮಕ್ಕೆ ಬರುವುದಕ್ಕಿಂತ ಮೊದಲು ಸೋಮಣ್ಣ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಳುಗಲಿ ಗ್ರಾಮದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದ ಯುವಕರು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪರವಾಗಿ ಜಯ ಘೋಷ ಕೂಗಿದರು. ಸಂವಿಧಾನ ಚೇಂಜ್ ಮಾಡ್ತೀವಿ ಎಂದರೆ ಸುಮ್ಮನಿರಲ್ಲ. ಸಂವಿಧಾನ ಬರೆದುಕೊಟ್ಟ ಅಂಬೇಡ್ಕರ್ ವಿರೋಧಿಗಳಿಗೆ ನಮ್ಮೂರಿಗೆ ಬರಲು ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಒದೆ ತಿಂದಿದ್ದೇನೆ: ವಿ.ಸೋಮಣ್ಣ
"ಸಂವಿಧಾನದ ಅಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಂಬೇಡ್ಕರ್ ಅವರು ಬರೆದುಕೊಟ್ಟ ಸಂವಿಧಾನದ ಅಡಿ ಸರ್ಕಾರ ನಡೆಸುವ ಇವರು ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಾರೆ. ಇಂತಹ ಸಂವಿಧಾನ ವಿರೋಧಿ ಬಿಜೆಪಿ ಪಕ್ಷಕ್ಕೆ ನಾವು ಮತ ಹಾಕಬೇಕಾ"? ಎಂದು ಪ್ರಶ್ನಿಸಿದರು. ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಾದರೂ ಗೆಲ್ಲಲಿ ಅಥವಾ ಸೋಮಣ್ಣ ಅವರಾದರೂ ಗೆಲ್ಲಲಿ. ಆದರೆ ಸಂವಿಧಾನವನ್ನು ಚೇಂಜ್ ಮಾಡುತ್ತೇನೆ ಎನ್ನುತ್ತಾರೆ. ಸಂವಿಧಾನ ಚೇಂಜ್ ಮಾಡಲು ಇವರು ಯಾರು? ಎಂದು ಗ್ರಾಮಸ್ಥರು ಹಾಗೂ ಯುವಕರು ಪ್ರಶ್ನೆ ಮಾಡಿದರು.
ಪ್ರಚಾರ ಮಾಡದೆ ವಾಪಸ್: ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು ಮತ್ತು ಪೊಲೀಸರು ಭೇಟಿ ನೀಡಿ ಮನವೊಲಿಕೆಗೆ ಯತ್ನಿಸಿದರು. ಆದರೆ ಯುವಕರು ಮತ್ತು ಗ್ರಾಮಸ್ಥರು ಪಟ್ಟು ಬಿಡದ ಹಿನ್ನೆಲೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ವಿ.ಸೋಮಣ್ಣ ಗ್ರಾಮಕ್ಕೆ ಬರದೆ ವಾಪಸ್ ಹೊರಟು ಹೋದರು.
ಇದನ್ನೂ ಓದಿ: ಸಿದ್ದರಾಮಯ್ಯ ವರುಣಾ ಕ್ಷೇತ್ರ ಅಭಿವೃದ್ಧಿ ಮಾಡಿದ್ದರೆ ಕೈ ಮುಗಿದು ನಾ ಹೊರಟು ಹೋಗುವೆ: ವಿ ಸೋಮಣ್ಣ ವ್ಯಂಗ್ಯ
ಮೂವರ ವಿರುದ್ಧ ಎಫ್‌ಐಆರ್: ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಅವರಿಗೆ ನಾಮಪತ್ರ ವಾಪಸ್ ಪಡೆಯುವಂತೆ ಆಮಿಷ ಒಡ್ಡಿದ್ದರು ಎಂದು ಆಡಿಯೋ ವೈರಲ್ ಆದ ಹಿನ್ನೆಲೆ ಮೂವರು ಅಪರಿಚಿತರ ವಿರುದ್ಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮಣ್ಣ, ನಟರಾಜು, ಸುದೀಪ್ ಎಂದು ಆಡಿಯೋದಲ್ಲಿ ಉಲ್ಲೇಖಗೊಂಡ ಮೂವರು ಹೆಸರುಗಳ ಮೇಲೆ ಅಪರಿಚಿತರು ಎಂದು ನಮೂದಿಸಿ ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯೋಗಾನಂದ ಮೌಖಿಕ ಆದೇಶದ ಮೇರೆಗೆ ಜಯಣ್ಣ ಎಂಬವರು ದೂರು ಕೊಟ್ಟಿದ್ದರು.
ಇದನ್ನೂ ಓದಿ: ವೈರಲ್ ಆಗಿರುವ ಆಡಿಯೋಗೂ ನನಗೂ ಸಂಬಂಧ ಇಲ್ಲ: ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ