ಮೈಸೂರು: ಸಂವಿಧಾನದ ಪ್ರಕಾರ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರದ ವ್ಯಕ್ತಿಗಳು ಮಂತ್ರಿಗಳ ಜೊತೆ ಸೇರಿ ಸಭೆ ನಡೆಸುವುದು ತಪ್ಪು ಎಂದು ಕೆಪಿಸಿಸಿ ವಕ್ತಾರ ಎಮ್.ಲಕ್ಷ್ಮಣ್ ಹೇಳಿದ್ದಾರೆ.
ಇಂದು ಮೈಸೂರಿನ ಸರ್ಕಾರಿ ಅಥಿತಿ ಗೃಹದಲ್ಲಿ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಖಾಸಗಿ ಆಸ್ಪತ್ರೆಗಳ ಮಾಲೀಕರ ಸಭೆ ನಡೆಸಿದ್ದು, ಆ ಸಭೆಯಲ್ಲಿ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಭಾಗವಹಿಸಿದ್ದರು. ನಂತರ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸುವ ಬಗ್ಗೆ ಆಸ್ಪತ್ರೆ ವೀಕ್ಷಣೆಗೆ ಆಗಮಿಸಿದ ವೇಳೆ ಸಚಿವರ ಜೊತೆ ವಿಜಯೇಂದ್ರ ಆಗಮಿಸಿದ್ದು ಸರಿಯಲ್ಲ. ಅವರಿಗೆ ಸರ್ಕಾರದಲ್ಲಿ ಯಾವುದೇ ಸಾಂವಿಧಾನಿಕ ಹುದ್ದೆ ಇಲ್ಲ. ಅವರು ಮುಖ್ಯಮಂತ್ರಿಯ ಮಗ ಅಷ್ಟೇ ಎಂದರು.
ಆದರೆ ಕೋವಿಡ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ವಿಜಯೇಂದ್ರರನ್ನು ಸಿಎಂ ಕಳುಹಿಸಿರಬಹುದು. ಜಿಲ್ಲೆಯಲ್ಲಿ ಬೆಡ್, ಆಕ್ಸಿಜನ್ ಕೊರತೆ ಇದ್ದು ಹಳ್ಳಿಗಳಲ್ಲಿ ಬೆಂಗಳೂರಿನಿಂದ ಬಂದ ಜನರೆಲ್ಲ ಕೊರೊನಾ ಹರಡುವ ಭೀತಿ ಇದೆ. ಈ ಬಗ್ಗೆ ಸರ್ಕಾರ ಗಮನಹರಿಸುತ್ತಿಲ್ಲ. ಈ ಸಂದರ್ಭದಲ್ಲಿ ಜನಸಾಮಾನ್ಯರ ಪರಿಸ್ಥಿತಿ ಕಷ್ಟವಾಗಿದೆ. ಕೂಡಲೇ ಬಡ ಜನರಿಗೆ 10 ಕೆ.ಜಿ.ಅಕ್ಕಿ ನೀಡಬೇಕು ಮತ್ತು 10 ಸಾವಿರ ಹಣವನ್ನು ನೆರವಿನ ರೂಪದಲ್ಲಿ ನೀಡಬೇಕು ಎಂದು ಲಕ್ಷ್ಮಣ್ ಸರ್ಕಾರಕ್ಕೆ ಆಗ್ರಹಿಸಿದರು.