ಮೈಸೂರು: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮನೆಗಳ ಮೇಲೆ ಬಿಜೆಪಿ ಬಾವುಟಗಳನ್ನು ತೆರವುಗೊಳಿಸಲು ಮುಂದಾದ ಚುನಾವಣಾ ಅಧಿಕಾರಿಗಳ ವಿರುದ್ಧ ಮನೆ ಮಾಲೀಕರು ಮಾತಿನ ಚಕಮಕಿ ನಡೆಸಿದ ಘಟನೆ ನಗರದ ಅಗ್ರಹಾರದಲ್ಲಿ ನಡೆದಿದೆ.
ಕಳೆದ ಒಂದು ತಿಂಗಳ ಹಿಂದೆ ಮೇರಾ ಪರಿವಾರ್ ಬಿಜೆಪಿ ಪರಿವಾರ್ ಆಂದೋಲನದಲ್ಲಿ ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರ ಮನೆಯ ಮೇಲೆ ಬಿಜೆಪಿ ಬಾವುಟ ಹಾಕಲಾಗಿತ್ತು. ಆದರೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ಚುನಾವಣಾ ಅಧಿಕಾರಿಗಳು ಮನೆಯ ಮೇಲಿನ ಈ ಬಾವುಟವನ್ನು ತೆರವುಗೊಳಿಸಲು ಮುಂದಾದಾಗ ಮನೆ ಮಾಲೀಕರು ಹಾಗೂ ಚುನಾವಣಾ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.
ಆ ನಂತರವು ಚುನಾವಣಾ ಅಧಿಕಾರಿಗಳು ಬಿಜೆಪಿ ಬಾವುಟವನ್ನು ಪೋಲಿಸ್ ಭದ್ರತೆಯಲ್ಲಿ ತೆರವುಗೊಳಿಸಿದರು.
ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಪ್ರತಾಪ್ ಸಿಂಹ:
ಚುನಾವಣಾ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ಮನೆಯ ಮೇಲೆ ಸ್ವಯಂ ಆಗಿ ಹಾಕಿಕೊಂಡಿರುವ ಬಾವುಟಗಳನ್ನು ಏಕಾಏಕಿ ತೆರವುಗೊಳಿಸುತ್ತಿದ್ದು, ಇದರಿಂದ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರನ್ನು ಭೇಟಿ ಮಾಡಿ ದೂರು ನೀಡಿದರು. ಜೊತೆಗೆ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.