ಮೈಸೂರು : ರಮೇಶ್ ಜಾರಕಿಹೊಳಿ ಹೋದರೆ ಯಡಿಯೂರಪ್ಪ ಸರ್ಕಾರ ಜಾರಿ ಹೋಗುತ್ತದೆ ಎಂದು ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಬಿಎಸ್ವೈಗೆ ಕುಟುಕಿದ್ದಾರೆ.
ನಂಜನಗೂಡಿನಲ್ಲಿ ಮಾ.26ರಂದು ಪಂಚ ಮಹಾರಥೋತ್ಸವ ನಡೆಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಡಿಯ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಆದರೆ, ರಮೇಶ್ ಜಾರಕಿಹೊಳಿಯನ್ನು ಪರಮ ಪವಿತ್ರ ಎಂದು ಬಿಂಬಿಸುತ್ತಿದ್ದಾರೆ. ಜಾರಕಿಹೊಳಿ ಪರ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾಡಬಾರದ ಅನಾಚಾರವನ್ನು ನೇರವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆರು ಜನ ಮಂತ್ರಿಗಳು ಬಾಂಬೆಗೆ ಹೋಗಿ ಏನೇನು ಮಾಡಿದ್ರು ಯಾರಿಗೆ ಗೊತ್ತು? ಅದೆಲ್ಲಾ ಆಚೆ ಬರುತ್ತೆ ಅಂತಾ ಕೋರ್ಟ್ಗೆ ಹೋಗಿ ಸ್ಟೇ ತಂದಿದ್ದಾರೆ. ಮಾನ-ಮರ್ಯಾದೆ ಇದ್ದವರು ಕೋರ್ಟ್ಗೆ ಹೋಗ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.
ನಂಜನಗೂಡು ಪಂಚ ಮಹಾರಥೋತ್ಸವಕ್ಕೆ ಅನುಮತಿಯಿಲ್ಲ. ಯಡಿಯೂರಪ್ಪ ಹುಚ್ಚ ದೊರೆ, ಹೈಲ್ ದೊರೆ, ಪಕ್ಷಾಂತರಿ ಕೆಟ್ಟ ಮುಖ್ಯಮಂತ್ರಿ. ಉಪಚುನಾವಣೆ ಘೋಷಣೆಯಾಗಿದೆ. ಅಲ್ಲಿಗೆ ಕೊರೊನಾ ಬರಲ್ವಾ? ಅಲ್ಲಿ ಚುನಾವಣೆ ಮಾಡ್ತೀರಾ? ಅಥವಾ ನಿಲ್ಲಿಸುತ್ತೀರಾ? ಜಾತ್ರೆ ಮಾಡಿದ್ರೆ ಕೊರೊನಾ ಬರುತ್ತೆ, ಚುನಾವಣೆ ಮಾಡಿದ್ರೆ ಬರಲ್ವಾ ಎಂದು ಛೇಡಿಸಿದರು.
ಯಡಿಯೂರಪ್ಪನಿಗೆ ವೋಟ್ ಕೊಟ್ಟು ಇವತ್ತು ಜನರು ಅನುಭವಿಸ್ತಾ ಇದ್ದೀರಿ ನೋಡಿ. ಈ ಸರ್ಕಾರದ ಎಲ್ಲಾ ಮಂತ್ರಿಗಳು ಹುಚ್ಚರು. ಇವರನ್ನೆಲ್ಲಾ ಹುಚ್ಚಾಸ್ಪತ್ರೆಗೆ ಸೇರಿಸಬೇಕು. ಸರ್ಕಾರ ನಡೆಸೋರಿಗೆ ತಲೆ ಇಲ್ಲ. ಮೊದಲು ಯಡಿಯೂರಪ್ಪಗೆ ತಲೆ ಇಲ್ಲ, ಆಡಿದ್ದೇ ಆಟ. ಈ ರಾಜ್ಯದಲ್ಲಿ ಅತ್ಯಂತ ಹೀನಾಯ ಮುಖ್ಯಮಂತ್ರಿನಾ ಇಲ್ಲಿಯತನಕ ನೋಡಿರಲಿಲ್ಲ ಎಂದು ಕಿಡಿಕಾರಿದರು.
ಓದಿ: 9ರಲ್ಲಿ 8 ಬೇಡಿಕೆ ಈಡೇರಿಸಿದರೂ ಯಾರ ಮೇಲಿನ ದ್ವೇಷಕ್ಕಾಗಿ ಮತ್ತೆ ಮುಷ್ಕರ: ಲಕ್ಷ್ಮಣ ಸವದಿ
ಸಣ್ಣ ರಥೋತ್ಸವಕ್ಕೆ ಅನುಮತಿ ಬೇಡ. ದೊಡ್ಡ ರಥೋತ್ಸವಕ್ಕೆ ಅನುಮತಿ ಕೊಡಲೇಬೇಕು. ಸಣ್ಣ ರಥೋತ್ಸವಕ್ಕೆ ಅನುಮತಿ ಕೊಟ್ಟಿದ್ದೀರಾ? ಹಾಗೆಯೇ ದೊಡ್ಡ ರಥಕ್ಕೂ ಅನುಮತಿ ನೀಡಿ ಎಂದು ಒತ್ತಾಯಿಸಿದರು.