ಮೈಸೂರು: ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕರಾದರೆ, ಯಡಿಯೂರಪ್ಪ ಲಿಂಗಾಯತ ಸಮುದಾಯದ ನಾಯಕ ಎಂದು ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮುದಾಯದ ಜನಮಾನಸದಲ್ಲಿ ಉಳಿಯಬೇಕಾದರೆ ಯಡಿಯೂರಪ್ಪ, ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದ್ರು.
ಬಸವ ಜಯಂತಿ ಆಚರಿಸಲು ಬಸವೇಶ್ವರರ ಫೋಟೋ ಸರ್ಕಾರಿ ಕಚೇರಿಯಲ್ಲಿ ಇಡಲು ಸಿದ್ದರಾಮಯ್ಯ ಬರಬೇಕಾಯಿತು. ನೀವು ಈಗ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ, ನಿಮ್ಮ ಬದ್ಧತೆ ಪ್ರದರ್ಶಿಸಿ ಎಂದು ಹೇಳಿದರು.
ಪಂಚಮಸಾಲಿ ಲಿಂಗಾಯತರಿಗೆ ಸಚಿವ ಸ್ಥಾನಕ್ಕೆ ಮತ್ತೆ ಒತ್ತಾಯ:
ಪಂಚಮಸಾಲಿಯ ಲಿಂಗಾಯತರು ಹೆಚ್ಚಿನ ಶಾಸಕರಿದ್ದಾರೆ. ಅದರಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಕಳೆದ ಹರ ಜಾತ್ರೆಯಲ್ಲಿ ನೇರವಾಗಿ ಇದನ್ನು ಕೇಳಿದ್ದೆ. ಹೈಕಮಾಂಡ್ ಮುಂದಿನ ದಿನಗಳಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದರು, ಈಗ ಆ ಭರವಸೆ ಈಡೇರಿಸಬೇಕು ಎಂದು ಒತ್ತಾಯಿಸಿದರು. ಕಡಿಮೆ ಸಂಖ್ಯೆಯಲ್ಲಿ ಇರುವ ಲಿಂಗಾಯತ ಉಪಪಂಗಡದವರಿಗೆ ಹೆಚ್ಚಿನ ಸಚಿವ ಸ್ಥಾನ ಸಿಕ್ಕಿದೆ. ಈ ಅಸಮಾನತೆ ಈ ಬಾರಿಯಾದರೂ ನಿವಾರಣೆ ಆಗಬೇಕು ಎಂದರು.
ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಸದ್ಯ ಸರ್ಕಾರದಲ್ಲಿ ಬಹಳಷ್ಟು ಸಾಕಷ್ಟು ಗೊಂದಲಗಳಿವೆ. ಗೊಂದಲ ಬಗೆಹರಿಸುವಂತೆ ರಾಷ್ಟ್ರೀಯ ನಾಯಕರಿಗೆ ತಿಳಿಸಿದ್ದೇನೆ ಎಂದು ಹೇಳಿದರು. ಇದೇ ವೇಳೆ, ರಾಜಕಾರಣಿಗಳು ತಪ್ಪು ಮಾಡಿದಾಗ ತಿದ್ದುವ ಶಕ್ತಿ, ಒಳ್ಳೆಯದು ಮಾಡಿದಾಗ ಬೆನ್ನು ತಟ್ಟುವ ಶಕ್ತಿ ನಮಗೆ ಇದೆ ಎಂದರು.