ಮೈಸೂರು: ವರುಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಇಂದು ವಿ.ಸೋಮಣ್ಣ ನಂಜನಗೂಡಿನ ತಹಶೀಲ್ದಾರ್ ಕಛೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದರಾದ ಪ್ರತಾಪ್ ಸಿಂಹ, ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು ಹಾಜರಿದ್ದರು.
ಇದಕ್ಕೂ ಮುನ್ನ ಬೆಳಗ್ಗೆ ಕೋಟೆ ಆಂಜನೇಯ ಹಾಗೂ ಚಾಮುಂಡೇಶ್ವರಿ ದೇವಿಗೆ ವಿ.ಸೋಮಣ್ಣ ಪೂಜೆ ಸಲ್ಲಿಸಿದರು. ನಂತರ ನಂಜನಗೂಡಿನ ಗೂಳೂರು ಸರ್ಕಲ್ನಲ್ಲಿ ಸಿ ಎಂ.ಬಸವರಾಜ ಬೊಮ್ಮಾಯಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜಿ.ಟಿ.ದೇವೇಗೌಡ ಇಂದು ಬೆಳಗ್ಗೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ಮೈಸೂರು ತಾಲ್ಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಿದ್ದರಾಮಯ್ಯ ಆಪ್ತ ಮಾವಿನಹಳ್ಳಿ ಸಿದ್ದೇಗೌಡ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆಯಲ್ಲಿ ಸಾಗಿಬಂದು ಮೈಸೂರು ತಾಲ್ಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಮೈಸೂರು ನಗರದ ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್.ನಾಗೇಂದ್ರ ನಗರದ ರಾಘವೇಂದ್ರ ಸ್ವಾಮಿಗಳ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಅಪಾರ ಬೆಂಬಲಿಗರೊಂದಿಗೆ ಮಹಾನಗರ ಪಾಲಿಕೆಗೆ ಆಗಮಿಸಿ, ಚುನಾವಣಾ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ಚಾಮುಂಡಿ ಪುರಂನಿಂದ ತಮ್ಮ ಬೆಂಬಲಿಗರೊಂದಿಗೆ ಮೈಸೂರು ಮಹಾನಗರ ಪಾಲಿಕೆಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ 3 ಪ್ರಮುಖ ಪಕ್ಷಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಇನ್ನೂ ಮೂರು ದಿನ ಬಾಕಿ ಇದೆ. ಮೈಸೂರು ನಗರದ ಕೆ.ಆರ್.ಕ್ಷೇತ್ರಕ್ಕೆ ಬಿಜೆಪಿ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಇಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂದು ಘೋಷಣೆ ಆಗಲಿದೆ ಎಂದು ಮೈಸೂರು ನಗರ ಬಿಜೆಪಿ ಅಧ್ಯಕ್ಷ ಶ್ರೀ ವತ್ಸ ತಿಳಿಸಿದರು.
ಇದನ್ನೂ ಓದಿ: ನಮ್ಮದು ಶಿಸ್ತಿನ ಪಕ್ಷ, ಬಿಜೆಪಿ ಜಾತಿಗೆ ಅಷ್ಟೇ ಸೀಮಿತ: ಎಸ್ ಎಸ್ ಮಲ್ಲಿಕಾರ್ಜುನ್ ಟಾಂಗ್