ಮೈಸೂರು : ಸಂಸದ ಪ್ರತಾಪ್‌ಸಿಂಹನಂತಹ ಮೂರ್ಖ ಯಾರಿಲ್ಲ. ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್ ಕಿಡಿಕಾರಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಮೂರ್ಖರ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?, ಅವನಿಗೆ ತಂದೆ ಮುಖ್ಯಾನ, ತಾಯಿ ಮುಖ್ಯಾನ ಅಂತಾ ಕೇಳಿದ್ರೆ ಉತ್ತರ ಸಿಗುತ್ತಾ?, ಶಿಕ್ಷಣದ ಜೊತೆ ಭಯ ಇರುವವರು ಮಾತ್ರ ಸತ್ಪ್ರಜೆ ಆಗಲು ಸಾಧ್ಯ. ಊಟ ಬೇಕಾ, ನೀರು ಬೇಕಾ ಅಂದ್ರೆ ಆಗುತ್ತಾ?. ನೀವು ಪಾರಂಪರಿಕ, ಐತಿಹಾಸಿಕ ಮೈಸೂರು ಸಂಸದ. ಮೈಸೂರಿನ ಘನತೆ ಉಳಿಸಿ, ಅದಕ್ಕೆ ಕಪ್ಪುಚುಕ್ಕೆ ತರಬೇಡಿ. ಎಲ್ಲರೂ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ಆದರೆ, ಪ್ರತಾಪ್‌ಸಿಂಹ ಸಮಸ್ಯೆಗೆ ಪರಿಹಾರ ಸಿಕ್ಕಾಗ ಸಮಸ್ಯೆ ಸೃಷ್ಟಿ ಮಾಡುತ್ತಾರೆ ಎಂದು ಟಾಂಗ್ ಕೊಟ್ಟರು.
ಸಂಸದ ಪ್ರತಾಪ್ ವಿರುದ್ಧ ವಾಗ್ದಾಳಿ : ಟಿಪ್ಪು ಎಕ್ಸ್‌ಪ್ರೆಸ್ ರೈಲು ಹೆಸರು ಬದಲಾವಣೆ ವಿಚಾರ ಮಾತನಾಡಿ, ಟಿಪ್ಪು ಎಕ್ಸ್‌ಪ್ರೆಸ್‌ಗೆ ಯಾವುದೇ ಹೆಸರಿಟ್ಟರೂ ಟಿಪ್ಪು, ಒಡೆಯರ್ ಕೊಡುಗೆ ಮರೆಮಾಚಲು ಸಾಧ್ಯವಿಲ್ಲ. ಪ್ರತಾಪ್‌ಸಿಂಹ ಸಂಸದನಾದ ಮೇಲೆ ಎಷ್ಟು ಹೊಸ ಟ್ರ್ಯಾಕ್, ಹೊಸ ರೈಲು, ಹೊಸ ಜಂಕ್ಷನ್ ತಂದಿದ್ದಾರೆ. ಆ ಕೆಲಸ ನಿಮ್ಮದಾ, ಅದನ್ನು ಮೊದಲು ಹೇಳಿ. ಒಡೆಯರ್-ಟಿಪ್ಪು ಇಬ್ಬರೂ ಮಹನೀಯರನ್ನು ನಾವು ಗೌರವಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ಎಲ್ಲಾ ವಲಯದಲ್ಲಿ ವಿಫಲ : ಹಿಜಾಬ್-ಕೇಸರಿ ಶಾಲು ವಿಚಾರವನ್ನು ಸದನದಲ್ಲಿ ಚರ್ಚೆ ಮಾಡುತ್ತೇವೆ. ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಅದನ್ನು ಮರೆಮಾಚಲು ಹಿಜಾಬ್ ವಿವಾದ ಎಳೆದು ತಂದಿದ್ದಾರೆ. ಪ್ರತಿಪಕ್ಷಗಳು ಆಡಳಿತ ಪಕ್ಷದ ವೈಫಲ್ಯ ಕೇಳಬೇಕು. ಆದರೆ, ನಮ್ಮ ರಾಜ್ಯದಲ್ಲಿ ಉಲ್ಟಾ ಆಗಿದೆ.
ಹೆತ್ತವರಿಗೆ ಮಾತ್ರ ಮಕ್ಕಳ ನೋವು ಗೊತ್ತಾಗೋದು. ರಾಜ್ಯ ಸರ್ಕಾರ ಎಲ್ಲಾ ಜಾತಿ ವರ್ಗವನ್ನು ಒಟ್ಟಿಗೆ ಕೊಂಡೊಯ್ಯಬೇಕು. ನಿರ್ಭಯವಾಗಿ ವ್ಯಾಸಂಗ ಮಾಡಲು ಅವಕಾಶ ನೀಡಬೇಕು. ಕೂಡಲೇ ಸರ್ವ ಪಕ್ಷ ಸಭೆ ಕರೆದು ಚರ್ಚೆ ಮಾಡಬೇಕು ಎಂದರು. ಶಾಸಕ ರಘುಪತಿ ಭಟ್‌ಗೆ ಜೀವ ಬೆದರಿಕೆ ವಿಚಾರವಾಗಿ ಮಾತನಾಡಿ, ಯಾರು ಯಾರಿಗೂ ಬೆದರಿಕೆ ಹಾಕಬಾರದು. ಅವರಿಗೆ ರಕ್ಷಣೆ ಕೊಡಬೇಕು. ಅದರಂತೆ ಜನಪ್ರತಿನಿಧಿಗಳು ಕೂಡ ಸಮಸ್ಯೆಗಳನ್ನ ಪರಿಹರಿಸಬೇಕು. ಪರಿಹಾರದಲ್ಲಿ ಸಮಸ್ಯೆ ಸೃಷ್ಟಿಸುವವರು ಕೆಲವರಿದ್ದಾರೆ. ಶಿಕ್ಷಣ ನೀಡುವುದು ಪ್ರಾಥಮಿಕ ಜವಾಬ್ದಾರಿ ಎಂದರು.
ಕೋರ್ಟ್ ತೀರ್ಪು ಬರೋವರೆಗೂ ಹಿಂದಿನ ಪದ್ಧತಿ ಮುಂದುವರೆಯಲಿ. ಎಲ್ಲವನ್ನೂ ನ್ಯಾಯಾಲಯವೇ ಬಗೆಹರಿಸಲು ಸಾಧ್ಯವಿಲ್ಲ. ಸರ್ಕಾರ ಕೂಡಲೇ ಧಾರ್ಮಿಕ ಮುಖಂಡರು, ಸರ್ವ ಪಕ್ಷಗಳ ಸಭೆ ನಡೆಸಬೇಕು. ಕೋರ್ಟ್ ಹೊರಗಡೆಯೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು. ಎಲ್ಲಾ ಕಡೆ ಕೋರ್ಟೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಸರ್ಕಾರವೇ ಮುಂದೆ ನಿಂತು ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.
ಶಾಲಾ ಶುಲ್ಕದಲ್ಲಿ ಸಮಾನತೆ ಏಕಿಲ್ಲ: ಸಮಾನತೆಗಾಗಿ ಸಮವಸ್ತ್ರ ನೀತಿ ಎಂಬ ಶಿಕ್ಷಣ ಸಚಿವ ನಾಗೇಶ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸಮಾನತೆ ಎನ್ನುವ ಶಿಕ್ಷಣ ಸಚಿವರು ಸ್ಕೂಲ್ ಫೀಸ್‌ನಲ್ಲಿ ಯಾಕೆ ಸಮಾನತೆ ತರುತ್ತಿಲ್ಲ. ಯಾಕೆ ಒಬ್ಬರು ಸ್ಕೂಟರ್‌ನಲ್ಲಿ ಬರ್ತಾರೆ, ಇನ್ನೊಬ್ಬರು ಬಸ್‌ನಲ್ಲಿ ಬರ್ತಾರೆ.
ಕಾಷ್ಲಿ ಬ್ಯಾಗ್ ಒಬ್ಬರು ತರ್ತಾರೆ, ಮಾಮೂಲಿ ಬ್ಯಾಗ್ ಇನ್ನೊಬ್ಬ ತರ್ತಾರೆ. ಏನೂ ಇಲ್ಲದವರು ಪ್ಲಾಸ್ಟಿಕ್ ಕವರ್ ಸುತ್ತಿಕೊಂಡು ತರ್ತಾರೆ. ಆಗ ಸಮಾನತೆ ಇಲ್ವ, ಹಿಜಾಬ್ ಧಾರಣೆ ಕಾನೂನು, ಸಂವಿಧಾನ ವಿರೋಧಿಯಾಗಿದ್ರೆ ಕ್ರಮಕೈಗೊಳ್ಳಲಿ. ಸಮಸ್ಯೆ ಇಲ್ಲದಿದ್ದಾಗ ಯಾಕೆ ಸಮಸ್ಯೆ ಉಂಟು ಮಾಡುತ್ತೀರಾ ಎಂದು ಪ್ರಶ್ನಿಸಿದರು.
ಬಿಜೆಪಿ ಯಾವುದೇ ಸೌಲಭ್ಯ ನೀಡಿಲ್ಲ : ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಯಾವುದೇ ಸಮಸ್ಯೆ ಇರಲಿಲ್ಲ. ಶಾಲೆ ಕಟ್ಟಲು ಸಾಕಷ್ಟು ಹಣ ಬರುತ್ತಿತ್ತು. ಇವತ್ತು ಬಿಜೆಪಿಯವರು ಒಂದು ಶಾಲೆ ಕಟ್ಟಿದ್ದಾರಾ?, ಉಚಿತ ಲ್ಯಾಪ್‌ಟಾಪ್, ಹೆಚ್ಚಿನ ವಿದ್ಯಾರ್ಥಿ ಶುಲ್ಕ ಕೊಡುತ್ತಿದ್ದೆವು. ಈ ಸೌಲಭ್ಯಗಳು ಬಿಜೆಪಿ ಸರ್ಕಾರದಲ್ಲಿ ಇದೆಯಾ?,ಬಿಜೆಪಿಯವರು ಶಿಕ್ಷಣ ಸಂಸ್ಥೆಗಳಲ್ಲಿ ಸಮಸ್ಯೆ ಉಂಟು ಮಾಡಿದ್ದಾರೆ. ಕಾಂಗ್ರೆಸ್ ಸಂವಿಧಾನದ ಪ್ರಕಾರ ಕೆಲಸ ಮಾಡುತ್ತಿದೆ ಎಂದರು.
ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯ ಯುವತಿಗೆ ಗಿಫ್ಟ್ ವಿಚಾರ ಮಾತನಾಡಿ,ಅಲ್ಲಾ ಹೋ ಅಕ್ಬರ್ ಅಂದ್ರೆ ದೇವರು ದೊಡ್ಡವನು ಎಂದರ್ಥ. ಅದರಲ್ಲೇನು ತಪ್ಪೇನಿದೆ. ಅದರ ಅರ್ಥ ಗೊತ್ತಿಲ್ಲದವರು ಬೇರೆ ಬೇರೆ ಆರೋಪ ಮಾಡ್ತಾರೆ. ಅಲ್ಲಾಹೋ ಅಕ್ಬರ್ ಎನ್ನುವುದು ಅರೇಬಿಕ್ ಪದ. ಕನ್ನಡದಲ್ಲಿ ದೇವರಿದ್ದಾನೆ. ದೇವರು ದೊಡ್ಡವನು ಎಂದರ್ಥ ಎಂದರು.
ಸಿಎಂ ಇಬ್ರಾಯಿ ವಿಚಾರ : ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷದ ಮುನಿಸಿನ ಬಗ್ಗೆ ಮಾತನಾಡಿ,ಇಬ್ರಾಹಿಂ ಅವರು ಅಪೇಕ್ಷೆ ಪಟ್ಟಿದ್ದು ಸಿಕ್ಕಿಲ್ಲ ಎಂಬ ನೋವಿನಿಂದ ಮಾತನಾಡುತ್ತಿದ್ದಾರೆ. ಅವರು ಅಪೇಕ್ಷೆ ಪಟ್ಟಿದ್ದು ಪರಿಷತ್ ವಿಪಕ್ಷ ಸ್ಥಾನ. ನನಗೆ ವಿಧಾನಸಭೆ ಉಪ ನಾಯಕ ಸ್ಥಾನ ಕೊಟ್ಟಿದ್ದಾರೆ. ನಾನು ಎನ್‌ಎಸ್‌ಯೂಐ ಜಿಲ್ಲಾಧ್ಯಕ್ಷನಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ, ಕೆಪಿಸಿಸಿ ಸದಸ್ಯನಾಗಿ, ನಾಲ್ಕು ಬಾರಿ ಶಾಸಕ, ಸಚಿವನಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ, ನನ್ನನ್ನು ಪಕ್ಷ ಗುರುತಿಸಿ ಉಪ ನಾಯಕನ ಸ್ಥಾನ ಕೊಟ್ಟಿದೆ ಎಂದರು.
ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪಂಚರ್ ಆಗಿರುವ ಬಸ್.. ಸಿ ಎಂ ಇಬ್ರಾಹಿಂ ವ್ಯಂಗ್ಯ