ಮೈಸೂರು: ಬಿಸಿಸಿಐನ 23 ವರ್ಷದೊಳಗಿನವರ ಏಕದಿನ ಕ್ರಿಕೆಟ್ ಟೂರ್ನಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ಮೈದಾನಗಳು ಸಿದ್ಧವಾಗಿದ್ದು, ಮೊದಲ ಬಾರಿಗೆ ಸಾಂಸ್ಕೃತಿಕ ನಗರಿಯಲ್ಲಿ ಈ ಟೂರ್ನಿ ನಡೆಯಲಿದೆ.
ಅಕ್ಟೋಬರ್ 31ರಿಂದ ನವೆಂಬರ್ 19ರವರೆಗೆ ನಡೆಯುವ ಬಿಸಿಸಿಐನ 23 ವರ್ಷದೊಳಗಿನ ಕ್ರಿಕೆಟ್ ಟೂರ್ನಿಯ ಪಂದ್ಯಗಳನ್ನು ಮೈಸೂರಿನ ಗಂಗೋತ್ರಿ ಗ್ಲೈಡ್ಸ್ ಕ್ರೀಡಾಂಗಣ, ಜೆಎಸ್ಎಸ್-ಎಸ್.ಜೆ.ಸಿ.ಇ ಮೈದಾನ ಹಾಗೂ ಮಂಡ್ಯದ ಪಿಇಟಿ ಮೈದಾನದಲ್ಲಿ ಆಯೋಜಿಸಲಾಗಿದೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ವತಿಯಿಂದ ನಡೆಯುವ ಈ ಟೂರ್ನಿಯಲ್ಲಿ ಆತಿಥೇಯ ಕರ್ನಾಟಕ ಸೇರಿದಂತೆ ಬರೋಡ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ವಿದರ್ಭ, ತಮಿಳುನಾಡು ತಂಡಗಳು ಭಾಗವಹಿಸಲಿದ್ದು ನಗರದಲ್ಲಿ ಅಭ್ಯಾಸ ನಡೆಸುತ್ತಿವೆ.
ಅಕ್ಟೋಬರ್ 31ರಂದು ಮೂರು ಮೈದಾನಗಳಲ್ಲಿ ಪಂದ್ಯಗಳು ಆರಂಭವಾಗಲಿದ್ದು, ಕರ್ನಾಟಕ ತಂಡ ನವೆಂಬರ್ 1ರಂದು ಗ್ಲೈ ಡ್ಸ್ನಲ್ಲಿ ಮಧ್ಯಪ್ರದೇಶ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದ್ದು, ಪ್ರತಿ ತಂಡಗಳು ಲೀಗ್ ಹಂತದಲ್ಲಿ 8 ಪಂದ್ಯಗಳನ್ನು ಆಡಲಿವೆ.
ಬಿಸಿಸಿಐ ನಡೆಸುವ ಪ್ರಮುಖ ಟೂರ್ನಿಗೆ ಸಾಂಸ್ಕೃತಿಕ ನಗರಿ ಆತಿಥ್ಯ ವಹಿಸುತ್ತಿರುವುದು ಸಂತೋಷವಾಗುತ್ತಿದೆ. ಈ ಹಿಂದೆ ಹಲವು ವಿಭಾಗಗಳಲ್ಲಿ ಟೂರ್ನಿಗಳು ನಡೆದಿವೆ. ಆದರೆ ಇದೇ ಮೊದಲ ಬಾರಿಗೆ 23 ವಯಸ್ಸಿನೊಳಗಿನ ಟೂರ್ನಿ ನಡೆಯುತ್ತಿದೆ ಎಂದು ಕೆ.ಎಸ್.ಸಿ.ಎ ಮೈಸೂರು ವಲಯದ ನಿಮಂತ್ರಕ ಸುಧಾಕರ್ ಅವರು ದೂರವಾಣಿ ಮೂಲಕ ತಿಳಿಸಿದರು.
ಯುವ ಕ್ರಿಕೆಟ್ ಆಟಗಾರರಿಗೆ ವೇದಿಕೆ:
ರಾಜ್ಯದ ಹಿರಿಯರ ತಂಡದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವ ಯುವ ಆಟಗಾರರಿಗೆ ತಮ್ಮ ಕ್ರೀಡಾ ಸಾಮಾರ್ಥ್ಯ ತೋರಲು ಉತ್ತಮ ವೇದಿಕೆಯಾಗಿದ್ದು, ಕರ್ನಾಟಕ ತಂಡವನ್ನು ಮನೋಜ್ ಭಾಂಡೆ ಮುನ್ನಡೆಸಲಿದ್ದು ತಂಡದಲ್ಲಿ ವೈಶಾಕ್ ವಿಜಯಕುಮಾರ್, ಕಿಶನ್ ಬೆದಾರೆ, ನಿಕಿನ್ ಜೋಸ್ ಮುಂತಾದ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.