ಮೈಸೂರು: ನೋಡಲು ಮಣ್ಣು ತುಂಬಿಕೊಂಡಂತೆ ಕಾಣುವ ಈ ಬೇರುಗಳು ತಿನ್ನಲು ಸ್ವಾದಿಷ್ಟಕರ ರುಚಿ ನೀಡುವುದರ ಜೊತೆಗೆ ಆರೋಗ್ಯ ವೃದ್ಧಿಗೆ ಅನುಕೂಲಕರವಾಗಿವೆ.
ಹೌದು, ನಂಜರಾಜ ಬಹದ್ದೂರ್ ಛತ್ರದಲ್ಲಿ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಹಾಗೂ ರೋಟರಿ ಕ್ಲಬ್ ಮೈಸೂರು ಪಶ್ಚಿಮ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ 'ಗೆಡ್ಡೆ ಗೆಣಸು ಮೇಳ' ಜನರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.
ಕ್ಯಾರೆಟ್ ಮತ್ತು ಬೀಟ್ರೂಟ್ ಐಸ್ ಕ್ರೀಮ್, ಸಿಹಿ ಗೆಣಸಿನ ಪಾಯಸ, ಮರಗೆಣಸಿನ ಜ್ಯೂಸ್, ಸೊಗದೇ ಬೇರಿನ ಜ್ಯೂಸ್, ಮಾವಿನ ಶುಂಠಿ, ಮಾಗಲಿ ಬೇರಿನ ಉಪ್ಪಿನಕಾಯಿ, ಕೆಸುವಿನ ಪತ್ರೊಡೆ, ಬಳ್ಳಿ ಆಲೂಗೆಡ್ಡೆ ಮತ್ತು ಚಾಮೆಗೆಡ್ಡೆ ಚಿಪ್ಸ್, ಮುಳ್ಳು ಗೆಣಸು, ಹೆಡಿಗೆ ಗೆಣಸು, ಸುಟ್ಟ ಕಾಡುಗೆಣಸು, ಮಲೆ ಜೇನು ತುಪ್ಪ, ಹೀಗೆ 200ಕ್ಕೂ ಹೆಚ್ಚು ಗೆಡ್ಡೆಗೆಣಸುಗಳಿವೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾದ ಹಾಗೂ ಅಪರೂಪದ ಗೆಡ್ಡೆ ಗೆಣಸುಗಳು ಬಾಯಿ ಚಪ್ಪರಿಸುವಂತೆ ಮಾಡುತ್ತಿವೆ.
ಓದಿ: ಸಾಂಸ್ಕೃತಿಕ ನಗರಿಯಲ್ಲಿ ಅದ್ಧೂರಿಯಾಗಿ ಜರುಗಿದ ಗೆಡ್ಡೆ ಗೆಣಸು ಮೇಳ
ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆಯ 98 ಕೆಜಿ ತೂಕ ಇರುವ ನಾಗರಕೋನ ಗೆಣಸು ಎಲ್ಲರನ್ನು ಆಕರ್ಷಿಸುತ್ತದೆ. ಜೋಯಿಡಾದ ಪಾಂಡುರಂಗ ಗಾವಡಾ ಅವರು 1 ವರ್ಷ 6 ತಿಂಗಳು ಸಮಯದಲ್ಲಿ ಇದನ್ನು ಬೆಳೆದಿದ್ದಾರೆ. ಕೇರಳದ ಶಾಜಿ 120 ಬಗೆಯ ವಿವಿಧ ಜಾತಿಯ ಗೆಡ್ಡೆ ಗೆಣಸಿನ ತಳಿಗಳನ್ನು ಸಂಗ್ರಹಿಸಿ ಪ್ರದರ್ಶಿಸಿದ್ದಾರೆ. ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಆದಿವಾಸಿಗಳು ಗೆಡ್ಡೆಗೆಣಸುಗಳ ಮಹತ್ವವನ್ನು ಸಾರುತ್ತಿದ್ದಾರೆ.
ಗೆಡ್ಡೆಗೆಣಸುಗಳನ್ನು ತಿಂದು ಋಷಿ ಮುನಿಗಳು ಹಾಗೂ ಆದಿವಾಸಿಗಳು ಆರೋಗ್ಯಯುತವಾಗಿ ನೂರಾರು ವರ್ಷ ಬದುಕುತ್ತಿದ್ದರು. ಕಾಲ ಬದಲಾಗುತ್ತಿದ್ದರೂ, ಸಂಪ್ರದಾಯದ ಆಹಾರಗಳಿಗೆ ಜನರು ಮನಸೋಲುತ್ತಿರುವುದರಿಂದ ಆಹಾರ ಪದ್ಧತಿ ಉಳಿಯುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ.