ಮೈಸೂರು : ಆಂತರಿಕ ವಿಚಾರಕ್ಕೆ ವಿದ್ಯಾರ್ಥಿಗಳನ್ನ ಕೂಡಿ ಹಾಕಿ ಟ್ರಸ್ಟಿಗಳು ಗಲಾಟೆ ಮಾಡಿರುವ ಘಟನೆ ಮೈಸೂರಿನ ವಿಜಯನಗರದ ರೇಣುಕಾ ಪಿಯು ಕಾಲೇಜಿನಲ್ಲಿ ಜರುಗಿದೆ.
ಆಕೃತಿ ಎಜುಕೇಶನ್ ಟ್ರಸ್ಟ್ ಹೆಸರಿನಲ್ಲಿ 5 ಜನ ಟ್ರಸ್ಟಿಗಳಾದ ವನಿತಾ, ಸಲೋನಿ, ರುನಾಲ್, ರೇಣುಕಾ ಹಾಗೂ ಅಶೋಕ ಕುಮಾರ್ ಎಂಬುವರು ಈ ಕಾಲೇಜು ನಡೆಸುತ್ತಿದ್ದರು.
ರೇಣುಕಾ ಶುಲ್ಕದ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ವನಿತಾ ಅವರು ರೇಣುಕಾರನ್ನ ಟ್ರಸ್ಟ್ನಿಂದ ವಜಾ ಮಾಡಿದ್ದರು. ಟ್ರಸ್ಟ್ನಿಂದ ವಜಾ ಮಾಡಿದಕ್ಕೆ ಆಕ್ರೋಶಗೊಂಡ ರೇಣುಕಾ ಅವರು ಕಾಲೇಜು ಜಾಗದ ಲೀಸ್ ಅನ್ನು ರದ್ದುಗೊಳಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಬೆಂಗಳೂರಿನಲ್ಲಿ ಹೆಚ್ಚಾದ್ರೆ ರಾಜ್ಯಕ್ಕೆ ಅನ್ವಯಿಸಬೇಡಿ.. ಶಾಲೆಗಳ ಬಂದ್ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟ ಆಕ್ಷೇಪ
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಜಾಗದ ಲೀಸ್ ಅನ್ನು ರದ್ದುಗೊಳಿಸಿದ್ದಾರೆ. ಅಲ್ಲದೇ ಅದೇ ಜಾಗವನ್ನು ಬೇರೆ ಟ್ರಸ್ಟ್ಗೆ ವರ್ಗಾವಣೆ ಮಾಡಿದ್ದಾರೆ. ಇನ್ನು ಹೊಸದಾಗಿ ಲೀಸ್ಗೆ ಪಡೆದವರು ನಿತ್ಯ ಕಾಲೇಜು ಬಳಿ ಗಲಾಟೆ ಮಾಡುತ್ತಿದ್ದಾರೆ.
ಕಾಲೇಜು ವಿದ್ಯಾರ್ಥಿಗಳನ್ನು ಒಳಗೆ ಸೇರಿಸಿ ಬೀಗ ಹಾಕಿ ಗಲಾಟೆ ಮಾಡುತ್ತಿದ್ದಾರೆ. ಹಾಗೆ ಕಾಲೇಜಿನ ಗೇಟ್ ಮುರಿದು, ಸಿಸಿ ಕ್ಯಾಮೆರಾಗಳನ್ನ ಧ್ವಂಸ ಕೂಡ ಮಾಡಿದ್ದಾರೆ.
ಪೊಲೀಸರ ಜತೆ ಮಾತಿನ ಚಕಮಕಿ : ವಿದ್ಯಾರ್ಥಿಗಳನ್ನು ನೂತನ ಟ್ರಸ್ಟಿಯಾದ ಶಿವಕುಮಾರ್ ಕೂಡಿ ಹಾಕಿದ್ದಾರೆ. ಪೊಲೀಸರು ಹೇಳಿದರೂ ಬೀಗ ತೆರೆಯದ ಶಿವಕುಮಾರ್, ಪೊಲೀಸರ ಜೊತೆಗೇ ಮಾತಿನ ಚಕಮಕಿ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಬಳಿಕ ಕಾಲೇಜಿನ ಬೀಗ ತೆರೆಸಿ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಡಿಡಿಪಿಯು ಶ್ರೀನಿವಾಸ್ ಮೂರ್ತಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.