ಮೈಸೂರು : ಸೂಕ್ತ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಆದಿವಾಸಿ ಸಮುದಾಯದ ಜನರು ಹಳ್ಳಿ ಬಿಟ್ಟು ಕಾಡಿಗೆ ಹೊರಡುತ್ತೇವೆ ಎಂದು ಪ್ರತಿಭಟನೆ ನಡೆಸಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಅಳಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಳಲಹಳ್ಳಿ ಗ್ರಾಮದಲ್ಲಿ ಸುಮಾರು 50 ಆದಿವಾಸಿ ಕುಟುಂಬಗಳು ವಾಸವಾಗಿವೆ. ನಮಗೆ ಯಾವುದೇ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಇಲ್ಲಿ ಕೆಲವರಿಗೆ ಮಾತ್ರ ಸರ್ಕಾರದ ರೇಷನ್ ದೊರಕುತ್ತಿದೆ. ಇನ್ನು ಕೆಲವರಿಗೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಸಹ ಇಲ್ಲ. ಮನೆಗಳ ವ್ಯವಸ್ಥೆ ಸರಿಯಾಗಿಲ್ಲ, ಮಳೆ ಬಂದರೆ ಕುಸಿದು ಬೀಳುವ ಆತಂಕವಿದೆ. ಹಾಗಾಗಿ ಕಾಡಿಗೆ ಹೊರಡುತ್ತೀವಿ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಅಳಲು ತೋಡಿಕೊಂಡ ಆದಿವಾಸಿಗಳು :
ನಾವು ಇಲ್ಲಿ ಸುಮಾರು ವರ್ಷಗಳಿಂದ ವಾಸವಿದ್ದೇವೆ ನಮಗೆ ಕಳೆದ 10 ವರ್ಷಗಳಿಂದಲೂ ಯಾವುದೇ ರೇಷನ್ ಕೊಡುತ್ತಿಲ್ಲ, ರೇಷನ್ ಕಾರ್ಡ್ ಇದ್ದರೂ ಯಾವುದೇ ಪ್ರಯೋಜನವಿಲ್ಲ ಎಂದು ಆದಿವಾಸಿಗಳು ಅಳಲು ತೋಡಿಕೊಂಡರು.