ಮೈಸೂರು: ಕೋವಿಡ್-19 ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆ, ಪ್ರಯಾಣಿಕರ ಅನುಕೂಲಕ್ಕಾಗಿ ಜುಲೈ 12ರಿಂದ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಬಸ್ ಸಂಚಾರ ಪುನಾರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಸೋಂಕು ಕಡಿಮೆಯಾಗಿರುವ ಕಾರಣ ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ತುಮಕೂರು ಒಳಗೊಂಡಂತೆ ರಾಜ್ಯದ ವಿವಿಧ ಸ್ಥಳಗಳಿಂದ ಕೇರಳ ರಾಜ್ಯದ ವಿವಿಧ ಸ್ಥಳಗಳಿಗೆ ಸಾರಿಗೆ ಕಾರ್ಯಾಚರಣೆ ನಡೆಸಲಾಗುವುದು. ಕರ್ನಾಟಕ ಸರ್ಕಾರದ ಮಾರ್ಗಸೂಚಿಗಳಂತೆ ನಿಗಮದ ಬಸ್ಸುಗಳಲ್ಲಿ ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿರುವ ಕೋವಿಡ್ ನೆಗೆಟಿವ್ ಪರೀಕ್ಷಾ ವರದಿ ಅಥವಾ ಕನಿಷ್ಠ 1 ಡೋಸ್ ಕೋವಿಡ್ ಲಸಿಕೆ ಪಡೆದಿರುವ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.
ವಿದ್ಯಾರ್ಥಿಗಳು, ಶಿಕ್ಷಣ, ವ್ಯವಹಾರ ಮತ್ತು ಇತರೆ ಕಾರಣಗಳಿಗಾಗಿ ಕರ್ನಾಟಕಕ್ಕೆ ದಿನನಿತ್ಯ ಪ್ರಯಾಣಿಸುವ ಸಾರ್ವಜನಿಕರು 15 ದಿನಗಳಿಗೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿ ನೆಗೆಟಿವ್ ಪರೀಕ್ಷಾ ವರದಿ ಹೊಂದಿರಬೇಕು. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.
ಇದನ್ನೂ ಓದಿ: ಝಿಕಾ ವೈರಸ್ ನಿಯಂತ್ರಣಕ್ಕೆ ಅಗತ್ಯ ಕ್ರಮ: ಆರೋಗ್ಯ ಸಚಿವ ಸುಧಾಕರ್
ಸಾರಿಗೆ ಇಲಾಖೆಯ ವೆಬ್ ಸೈಟ್ ksrtc.karnataka.gov.in/www.ksrtc.in ಮತ್ತು ನಿಗಮದ ಕೌಂಟರ್‌ಗಳ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದೂರವಾಣಿ ಸಂಖ್ಯೆ 080-26252625 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..