ಮೈಸೂರು: ಹುಣಸೂರಿನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಬಸ್ಗೆ ರಂಗಯ್ಯನಕೊಪ್ಪಲು ಗೇಟ್ ಬಳಿ ಸಾರಿಗೆ ನೌಕರರೇ ಕಲ್ಲು ತೂರಿ ಪ್ರಯಾಣಿಕರನ್ನು ಗಾಯಗೊಳಿಸಿದ ಘಟನೆ ನಡೆದಿದೆ.
ಸಂತೋಷ್ ಭಜಂತ್ರಿ ಹಾಗೂ ಕೃಷ್ಣ ಮೂರ್ತಿ ಕೃತ್ಯ ವೆಸಗಿದ ಸಾರಿಗೆ ನೌಕರರು ಎಂದು ತಿಳಿದುಬಂದಿದ್ದು, ಅವರು ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಬೆನ್ನಟ್ಟಿ ಆರೋಪಿಗಳನ್ನು ಅರಬ್ಬಿತಿಟ್ಟು ಅರಣ್ಯ ಪ್ರದೇಶದ ರಸ್ತೆಯಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗೋಪಾಲಸ್ವಾಮಿ ಎಂಬುವವರ ತಲೆಗೆ ಪೆಟ್ಟು ಬಿದ್ದಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದಲ್ಲದೆ ಈ ಸಾರಿಗೆ ನೌಕರರು ಗಾವಡಗೆರೆ, ಯಶೋಧರಪುರ ಹಾಗೂ ಬೋಳನಹಳ್ಳಿ ಬಳಿ ತಲಾ ಒಂದು ಬಸ್ಗೆ ಕಲ್ಲು ತೂರಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಬಿಳಿಕೆರೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ನೀಡಿದ ಭರವಸೆ ಈಡೇರಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಸಾರಿಗೆ ನೌಕರರು
ಪ್ರತಿಭಟಿಸಿದ ಮಹಿಳೆಯರು:
ಹುಣಸೂರು ಸಾರಿಗೆ ಸಂಸ್ಥೆ ನೌಕರರ ಧರಣಿಯನ್ನು ಬೆಂಬಲಿಸಿ ಕುಟುಂಬದ ಮಂದಿ ಮಕ್ಕಳ ಸಮೇತ ಹುಣಸೂರು ಬಸ್ ಡಿಪೋ ಪ್ರತಿಭಟನೆ ನಡೆಸಿದರು. ಸರ್ಕಾರ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಡಿಪೋದಿಂದ ಹೊರ ಬರುತ್ತಿದ್ದ ಬಸ್ಸನ್ನು ಮಹಿಳೆಯರು ತಡೆಗಟ್ಟಲು ಮುಂದಾದ ವೇಳೆ ಇನ್ಸ್ಪೆಕ್ಟರ್ ರವಿ ಹಾಗೂ ಪೊಲೀಸರು ಅವರನ್ನು ನಿಯಂತ್ರಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.