ಮೈಸೂರು: ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲೇ ನರಳುತ್ತಿದ್ದ ವ್ಯಕ್ತಿಯನ್ನು ಸಂಚಾರಿ ವಾಹನದಲ್ಲೇ ಪೊಲೀಸರು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಘಟನೆ ಇಲ್ಲಿನ ಮುಡಾ ಸರ್ಕಲ್ನಲ್ಲಿ ನಡೆದಿದೆ.
ಇಂದು ಬೆಳಗ್ಗೆ 11.30 ರ ಸುಮಾರಿಗೆ ಬಸ್ ನಿಲ್ದಾಣದಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಮುಡಾ ಸರ್ಕಲ್ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಬೈಕ್ ಸವಾರನಿಗೆ ತಲೆಗೆ ಹೆಲ್ಮೆಟ್ ಇಲ್ಲದ ಕಾರಣ ಪೆಟ್ಟಾಗಿ ರಕ್ತಸ್ರಾವವಾಗಿ ರಸ್ತೆಯಲ್ಲೇ ಕುಸಿದುಬಿದ್ದಿದ್ದರು.
ಆಗ ಆಂಬ್ಯುಲೆನ್ಸ್ಗೆ ಕರೆ ಮಾಡಿದರೂ ಸಕಾಲಕ್ಕೆ ಅದು ಬರದ ಕಾರಣ ಅದೇ ಮಾರ್ಗವಾಗಿ ಸಂಚಾರಿ ಇಂಟರ್ಸ್ಪೆಕ್ಟರ್ ವಾಹನದಲ್ಲಿ ಸಂಚರಿಸುತ್ತಿದ್ದ ಇನ್ಸ್ಪೆಕ್ಟರ್ ಶಿವಕುಮಾರ್ ಅವರು, ರಕ್ತಸ್ರಾವವಾಗುತ್ತಿದ್ದ ಈ ಗಾಯಾಳುವನ್ನು ತಮ್ಮ ವಾಹನದಲ್ಲೇ ಕೂರಿಸಿಕೊಂಡು ಕೆ.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರು. ಗಾಯಾಳು ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಚಾರಿ ಪೊಲೀಸರು ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.