ಮೈಸೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿಯ ಪ್ರವಾಸಿ ತಾಣಗಳನ್ನು ನೋಡಲು ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಇಲ್ಲಿನ ಅಂಬಾವಿಲಾಸ ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿದ್ದು, ನಗರದಲ್ಲಿರುವ ಎಲ್ಲ ಲಾಡ್ಜ್ಗಳೂ ಭರ್ತಿಯಾಗಿವೆ.
ಕೆಲವು ಶಾಲಾ, ಕಾಲೇಜುಗಳಿಗೆ ರಜೆಗಳಿರುವುದರಿಂದ ರಾಜ್ಯದೆಲ್ಲೆಡೆಯಿಂದ ಹಾಗೂ ಬೇರೆ ಬೇರೆ ರಾಜ್ಯಗಳಿಂದಲೂ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದಾರೆ. ಶಾಲಾ ಮಕ್ಕಳಿಗಾಗಿ ಶೈಕ್ಷಣಿಕ ಪ್ರವಾಸವನ್ನೂ ಆಯೋಜಿಸಿರುವುದರಿಂದ ಸಾಂಸ್ಕೃತಿಕ ನಗರಿ ಪ್ರವಾಸಿಗರಿಂದ ತುಂಬುತ್ತಿದೆ.
ಅಂಬಾವಿಲಾಸ ಅರಮನೆ ಆಕರ್ಷಣೆ: ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳ ಎಂಬ ಖ್ಯಾತಿ ಪಡೆದಿರುವ ನಗರದ ಅಂಬಾವಿಲಾಸ ಅರಮನೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅರಮನೆ ಆವರಣದಲ್ಲಿ ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಏರ್ಪಡಿಸಿರುವ ಹತ್ತು ದಿನಗಳ ಕಾಲದ ಫಲಪುಷ್ಪ ಪ್ರದರ್ಶನ ಪ್ರವಾಸಿಗರನ್ನು ಸೆಳೆಯುತ್ತಿದೆ. ಸೋಮನಾಥಪುರ ದೇವಾಲಯ, ಹಂಪಿಯ ಕಲ್ಲಿನ ರಥ, ಅರ್ಜುನ ಆನೆಯ ಮಾದರಿ, ವಿರೂಪಾಕ್ಷ ದೇವಾಲಯದ ಮಾದರಿ ಸೇರಿದಂತೆ ಹಲವು ಮಾದರಿಗಳನ್ನು ನಾಲ್ಕು ಲಕ್ಷಕ್ಕೂ ಹೆಚ್ಚಿನ ಹೂಗಳಿಂದ ನಿರ್ಮಿಸಲಾಗಿದೆ.
ಹೋಟೆಲ್ಗಳು ಭರ್ತಿ: ನಗರದ 425 ಹೋಟೆಲ್ಗಳಲ್ಲಿರುವ 10,500 ರೂಂಗಳು ಡಿಸೆಂಬರ್ 23 ರಿಂದ ಡಿಸೆಂಬರ್ 31ರವರೆಗೆ ಶೇ.100ರಷ್ಟು ಭರ್ತಿಯಾಗಿವೆ. ಹೀಗಾಗಿ ಹೆಚ್ಚಿನ ವಹಿವಾಟು ನಡೆಯುತ್ತಿದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ 'ಈಟಿವಿ ಭಾರತ್'ಗೆ ಮಾಹಿತಿ ನೀಡಿದ್ದಾರೆ.
ಮೈಸೂರು ನಗರಕ್ಕೆ ಹೊಂದಿಕೊಂಡಂತಿರುವ ಕೆಆರ್ಎಸ್ ಡ್ಯಾಂ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ, ನಾಗರಹೊಳೆ ಹಾಗೂ ಕೊಡಗಿನ ಪ್ರವಾಸಿ ತಾಣಗಳನ್ನು ನೋಡಲು ಆಗಮಿಸಿರುವ ಪ್ರವಾಸಿಗರು ಸಹ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದು, ಇದರ ಜೊತೆಗೆ ಶಕ್ತಿ ಯೋಜನೆಯಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಮೃಗಾಲಯದಲ್ಲಿ ದಾಖಲೆ ಸಂಖ್ಯೆಯ ಪ್ರವಾಸಿಗರು: ಕಳೆದ ಮೂರು ದಿನಗಳಿಂದ ಚಾಮರಾಜೇಂದ್ರ ಮೃಗಾಲಯಕ್ಕೆ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಮೂರು ದಿನಗಳಲ್ಲಿ 1,01,965 ಪ್ರವಾಸಿಗರು ಬಂದಿದ್ದು, ಕಳೆದ ವರ್ಷ ಇದೇ ಮೂರು ದಿನಗಳಲ್ಲಿ 77,833 ಮಂದಿ ಭೇಟಿ ನೀಡಿದ್ದರು ಎಂದು ಮೃಗಾಲಯ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಟ್ರಾಫಿಕ್ ಜಾಮ್: ಬೆಂಗಳೂರು-ಮೈಸೂರು ನಡುವಿನ ಹೆದ್ದಾರಿಯ ಟೋಲ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದರೆ, ಮತ್ತೊಂದು ಕಡೆ ಮೈಸೂರು ನಗರದ ಹೆಬ್ಬಾಗಿಲು ಮಣಿಪಾಲ್ ಆಸ್ಪತ್ರೆಯ ಬಳಿ ಎರಡು ಕಿಲೋಮೀಟರ್ಗೂ ಹೆಚ್ಚು ಟ್ರಾಫಿಕ್ ಜಾಮ್ ಕಂಡುಬಂತು. ಅರಮನೆ ಸುತ್ತಲಿನ ರಸ್ತೆ ಜೊತೆಗೆ ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದೆ. ಟ್ರಾಫಿಕ್ ಪೊಲೀಸರು ಹರಸಾಹಸಪಡುತ್ತಿರುವುದು ಕಂಡುಬಂತು.
ಇದನ್ನೂ ಓದಿ: ವರ್ಷಾಂತ್ಯಕ್ಕೆ ಸಾಲು ಸಾಲು ರಜೆ: ಗೋವಾ ಬಿಟ್ಟು ಕಡಲನಗರಿಯತ್ತ ಮುಖ ಮಾಡಿದ ಪ್ರವಾಸಿಗರು