ಮೈಸೂರು : ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕಾಲೇಜುಗಳು ಇಂದಿನಿಂದ ಪುನಾರಂಭಗೊಂಡಿವೆ. ಕೋರ್ಟ್ ಆದೇಶವನ್ನು ಮೀರಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಸೂಕ್ಷ್ಮ ಪ್ರದೇಶವಾದ ಎನ್.ಆರ್.ಕ್ಷೇತ್ರದ ವ್ಯಾಪ್ತಿಯಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ.
ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಡೇ ಆಚರಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾಲೇಜಿನ ಸುತ್ತ ಹದ್ದಿನ ಕಣ್ಣು ಇಟ್ಟಿದ್ದಾರೆ.
ಡಿಡಿಪಿಯು ಏನಾಂತರೆ? : ಈ ವಿಚಾರವಾಗಿ ಡಿಡಿಪಿಯು ಶ್ರೀನಿವಾಸ್ ಮೂರ್ತಿ ಪ್ರತಿಕ್ರಿಯಿ ನೀಡಿದ್ದರು. ಜಿಲ್ಲೆಯಲ್ಲಿ ಒಟ್ಟು 257 ಕಾಲೇಜುಗಳಿವೆ. 15 ಕಾಲೇಜು ಹೊರತುಪಡಿಸಿ ಎಲ್ಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯ ನಿಯಮವಿದೆ. ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಿದ್ದಾರೆ. ನಾನು ಸಹ ಹಲವು ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.
ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಎಲ್ಲಾ ಪ್ರಾಂಶುಪಾಲರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ನ್ಯಾಯಾಲಯದ ಆದೇಶ ಪಾಲಿಸುವಂತೆ ತಿಳಿಸಲಾಗಿದೆ. ಪರೀಕ್ಷೆಗಳು ಹತ್ತಿರವಿದ್ದು, ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ಪೋಷಕರು ನ್ಯಾಯಾಲಯದ ಆದೇಶಕ್ಕೆ ಸಹಕಾರ ನೀಡಬೇಕು. ಸಮವಸ್ತ್ರವನ್ನು ಮಾತ್ರ ಧರಿಸಿ ತರಗತಿಗೆ ಬರುವಂತೆ ನೋಡಿಕೊಳ್ಳಬೇಕು ಎಂದರು.
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲರ ಪತ್ರಿಕ್ರಿಯೆ : ಯಾರೂ ಹಿಜಾಬ್ ಹಾಕಿ ತರಗತಿಯಲ್ಲಿ ಕುಳಿತ್ತಿಲ್ಲ. ನಮ್ಮಲ್ಲಿ ಹಲವು ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಅವರೆಲ್ಲ ಹಿಜಾಬ್ ಧರಿಸಿ ಬಂದರೂ ತರಗತಿಗೆ ಹೋಗುವಾಗ ತೆಗೆದಿದ್ದಾರೆ. ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಿದ್ದಾರೆ. ಹಿಜಾಬ್, ಬುರ್ಖಾ ತೆಗೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಯಾರು ಕಾಲೇಜಿನಿಂದ ಹಿಂದಿರುಗಿ ಹೋಗಿಲ್ಲ ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಶುಂಪಾಲರಾದ ಸುನೀಲ್ ಡಿಸೋಜ ಸ್ಪಷ್ಟನೆ ನೀಡಿದರು.
ಫೆಬ್ರವರಿ 4ರಂದು ಹಿಜಾಬ್ ಡೇ ಆಚರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ಕ್ಯಾಂಪಸ್ ಹೊರಗೆ ನಡೆದಿರುವುದು. ಇದಕ್ಕೂ ನಮಗೂ ಸಂಬಂಧವಿಲ್ಲ. ಕ್ಯಾಂಪಸ್ ಒಳಗಡೆ ಇಂತಹ ಚಟುವಟಿಕೆಗೆ ಅವಕಾಶವಿಲ್ಲ. ವಿದ್ಯಾರ್ಥಿಗಳು ಹೊರಗೆ ಹೋದ ಮೇಲೆ ಏನೇ ಮಾಡಿದರು ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಹಿಜಾಬ್ ಸಂಬಂಧ ಹೈಕೋರ್ಟ್ ಆದೇಶ ಪಾಲಿಸಿ, ಇಲ್ಲವೇ ಶಿಸ್ತು ಕ್ರಮ ಕೈಗೊಳ್ಳುತ್ತೇವೆ'