ಮೈಸೂರು: ನಿನ್ನೆ ಸಂಸತ್ನಲ್ಲಿ ಆದ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಐವರನ್ನು ಬಂಧಿಸಲಾಗಿದೆ. ಆರೋಪಿಗಳು ಸಂಸದ ಪ್ರತಾಪ್ ಸಿಂಹ ಅವರಿಂದ ವೀಕ್ಷಕರ ಪಾಸ್ ಪಡೆದು ಹೋಗಿದ್ದರು ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪ್ ಸಿಂಹ ಅವರ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಂಸದರ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬುಧವಾರ ಸಂಸತ್ನ ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ. ಅದರಲ್ಲಿ ಒಬ್ಬ ಮನೋರಂಜನ್ ಎಂಬ ಯುವಕ ಮೈಸೂರಿನ ವಿಜಯನಗರ ಎರಡನೇ ಹಂತದ ನಿವಾಸಿಯಾಗಿದ್ದಾನೆ. ಈತ ಸಂಸತ್ ಕಲಾಪ ವೀಕ್ಷಣೆ ಮಾಡಲು ಸಂಸದ ಪ್ರತಾಪ್ ಸಿಂಹ ಅವರ ಕಡೆಯಿಂದ ಪಾಸ್ ಪಡೆದು ಹೋಗಿದ್ದ ಎಂಬ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿ, ಸಂಸದ ಪ್ರತಾಪ್ ಸಿಂಹ ಅವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು.
ಈ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಕಛೇರಿ ಇರುವ ಜಲದರ್ಶಿನಿ ಅತಿಥಿ ಗೃಹದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಜಾಗ್ರತಾ ದೃಷ್ಟಿಯಿಂದ ಕರ್ನಾಟಕ ರಾಜ್ಯ ಮೀಸಲು ಪಡೆಯ ತುಕಡಿಯನ್ನು ನಿಯೋಜನೆ ಮಾಡಲಾಗಿದೆ. ಜಲದರ್ಶಿನಿ ಅತಿಥಿ ಗೃಹದ ಒಳಗಿರುವ ಸಂಸದರ ಕಛೇರಿ ಮುಂಭಾಗದಲ್ಲಿ ಸ್ಥಳೀಯ ದೇವರಾಜ ಪೊಲೀಸ್ ಠಾಣೆಯ ವತಿಯಿಂದ ಬ್ಯಾರಿಕೇಡ್ ಹಾಕಲಾಗಿದೆ. ಕಚೇರಿಗೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಮನೋರಂಜನ್ ಮನೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್: ಸಂಸತ್ನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿ ಮೈಸೂರು ಮೂಲದ ಮನೋರಂಜನ್ ಮನೆ ಇರುವ ನಗರದ ವಿಜಯನಗರದ ಎರಡನೇ ಹಂತದಲ್ಲಿ, ಮನೆಯ ಬಳಿ ಸ್ಥಳೀಯ ಪೊಲೀಸ್ ಠಾಣಾ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಭದ್ರತೆ ಹಾಕಲಾಗಿದೆ. ನಿನ್ನೆ ಆರೋಪಿ ಮನೋರಂಜನ್ ತಂದೆ ದೇವರಾಜು ಮಾಧ್ಯಮಗಳ ಜೊತೆ ಮಾತನಾಡಿದ್ದು, ಇಂದು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಮನೋರಂಜನ್ ಮನೆಗೆ ಕೇಂದ್ರದ ಗುಪ್ತಚರ ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು, ಬುಧವಾರ ಲೋಕಸಭಾ ಕಲಾಪದ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಯುವಕರಿಬ್ಬರು ಸದನದ ಒಳಗೆ ಜಿಗಿದು, ಹಳದಿ ಬಣ್ಣದ ಸ್ಮೋಕ್ ಕ್ರ್ಯಾಕರ್ ಸಿಡಿಸಿದ್ದರು. ಇದರಿಂದ ಭಯಗೊಂಡ ಸಚಿವರು ಹಾಗೂ ಸಂಸದರು ಸದನದಿಂದ ಹೊ ಓಡಿದ್ದರು. ನಂತರ ಕೆಲವರು ಯುವಕರನ್ನು ಹಿಡಿದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು. ಪ್ರಕರಣ ಸಂಬಂಧ ಈವರೆಗೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಭದ್ರತಾ ಲೋಪ ಪ್ರಕರಣ; ಪ್ರತಿಪಕ್ಷಗಳಿಂದ ಕೋಲಾಹಲ, ಸಂಸತ್ ಭದ್ರತಾ ತಂಡದ 8 ಸಿಬ್ಬಂದಿ ಅಮಾನತು