ಮೈಸೂರು : ನರಬಲಿ ಪಡೆದ ಹುಲಿ ಸೆರೆಗೆ ಒಂದು ಕಡೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿರುವಾಗಲೇ, ಮತ್ತೊಂದು ಕಡೆ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡಿದೆ. ಹೀಗಾಗಿ ಕಾರ್ಯಾಚರಣೆ ನಡೆಸುವುದು ಅರಣ್ಯ ಇಲಾಖೆಯ ಸಿಬ್ಬಂದಿಗೆ ಸವಾಲಾಗಿದೆ. ಈ ನಡುವೆ 207ಕ್ಕೂ ಹೆಚ್ಚು ಅರಣ್ಯ ಇಲಾಖೆಯ ವಿವಿಧ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.
ನರಬಲಿ ಪಡೆದ ಹುಲಿ ಸೆರೆಗೆ ಅರಣ್ಯ ಇಲಾಖೆಯ 207ಕ್ಕೂ ಹೆಚ್ಚಿನ ಸಿಬ್ಬಂದಿ ಸಾಕಾನೆ, ಡ್ರೋನ್ ನೆರವಿನಿಂದ ಯಡಿಯಾಲ ಅರಣ್ಯ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಆದರೆ ಇವರಿಗೆ ಹುಲಿ ಮಾತ್ರ ಕಾಣಿಸುತ್ತಿಲ್ಲ. ಆದರೂ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಭಾನುವಾರ ಯಡಿಯಾಲ ಸಮೀಪದ ಬಳ್ಳೂರು ಹುಂಡಿಯ ತೊಟ್ಟಿಹಳ್ಳ ಸಮೀಪ ಒಂದು ಹಸು ಹಾಗೂ ಅದಕ್ಕಿಂತ 500 ಮೀಟರ್ ದೂರದ ಬಳ್ಳೂರು ಕಟ್ಟೆ ಬಳಿ ಎತ್ತೊಂದು ಹುಲಿ ದಾಳಿಗೆ ಬಲಿಯಾಗಿದೆ. ಇದು ಅರಣ್ಯ ಇಲಾಖೆಯವರಿಗೆ ಸವಾಲಾದರೆ, ಕಾಡಂಚಿನ ಗ್ರಾಮಗಳ ಜನರಿಗೆ ಸಂಕಷ್ಟ ತಂದೊಡ್ಡಿದೆ.
ಹುಲಿ ಒಂದೋ ಅಥವಾ ಎರಡೋ : ಭಾನುವಾರ ಮಧ್ಯಾಹ್ನ ಯಡಿಯಾಲ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬಳ್ಳೂರು ಹುಂಡಿಯ ತೊಟ್ಟಿಹಳ್ಳ ಹಾಗೂ ಬಳ್ಳೂರು ಕಟ್ಟೆ ಬಳಿ, ಹಸು ಮತ್ತು ಎತ್ತಿನ ಮೇಲೆ ದಾಳಿ ಮಾಡಿರುವ ಹುಲಿ ಒಂದೇ ಅಥವಾ ಎರಡಿರಬಹುದೇ ಎಂಬುದು ಅರಣ್ಯ ಇಲಾಖೆಯ ಸಿಬ್ಬಂದಿಯ ಜಿಜ್ಞಾಸೆಗೆ ಕಾರಣವಾಗಿದೆ. ಸತ್ತ ಹಸುವಿನ ಹಾಗೂ ಎತ್ತಿನ ಜಾಗದ ಸುತ್ತಮುತ್ತ ಅರಣ್ಯ ಇಲಾಖೆ ಸಿಬ್ಬಂದಿ ಇಂದು ಕ್ಯಾಮರಾವನ್ನು ಅಳವಡಿಸಿದ್ದಾರೆ. ಹೀಗೆ ದಾಳಿ ಮಾಡುವ ಹುಲಿ ಒಂದೇ ಅಥವಾ ಎರಡೇ ಎಂಬುದನ್ನು ತಿಳಿಯಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ಕಾರ್ಯಾಚರಣೆಯಲ್ಲಿ ಸಾಕಾನೆಗಳು : ಹುಲಿ ಸೆರೆ ಕಾರ್ಯಾಚರಣೆಗೆ ಯಡಿಯಾಲ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಿರಣ್ಯ, ಪಾರ್ಥ, ರೋಹಿತ ಎಂಬ ಮೂರು ಸಾಕಾನೆಗಳನ್ನು ಬಳಸಿಕೊಂಡು ಹುಲಿ ದಾಳಿ ಮಾಡುವ ಪ್ರದೇಶಗಳಲ್ಲಿ ಬೋನ್ಗಳನ್ನು ಇರಿಸಲಾಗಿದೆ. ಹುಲಿಯ ಚಲನವಲನಗಳನ್ನು ಕಂಡುಹಿಡಿಯಲು ಡ್ರೋನ್ ಕ್ಯಾಮರಾ ಬಳಸಲಾಗುತ್ತಿದೆ. ಜೊತೆಗೆ ಕಾಡಂಚಿನ ಗ್ರಾಮದ ಜನರು ಅರಣ್ಯದ ಸಮೀಪ ತಮ್ಮ ಜಾನುವಾರುಗಳನ್ನು ಬಿಡದಂತೆ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ದಾಳಿ ಮಾಡಿದ ಹುಲಿ ಪತ್ತೆಗೆ ಕಾರ್ಯಾಚರಣೆ : ಮಹಿಳೆಯ ಮೇಲೆ ದಾಳಿ ಮಾಡಿದ ಹುಲಿಯನ್ನು ಪತ್ತೆ ಮಾಡುವ ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದೆ. ಈ ಹುಲಿ ಪತ್ತೆಗಾಗಿ ಕ್ಯಾಮರಾ ಅಳವಡಿಸಲಾಗಿದೆ. ಕೆಲವು ಕಡೆ ಹುಲಿ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಈ ಹುಲಿಯನ್ನು ಸೆರೆ ಹಿಡಿಯಲು 207 ನುರಿತ ಅರಣ್ಯ ಸಿಬ್ಬಂದಿ ಹಾಗೂ ನೂರಕ್ಕೂ ಹೆಚ್ಚು ಜನ ಬುಡಕಟ್ಟು ಸಮುದಾಯದ ಪರಿಣತಿ ಹೊಂದಿರುವ ಜನರನ್ನು ಬಳಸಿಕೊಳ್ಳಲಾಗಿದೆ. ಕಾರ್ಯಾಚರಣೆಗೆ ಮೂರು ಸಾಕಾನೆ, ಒಂದು ಡ್ರೋನ್ ಹಾಗೂ ಜಿಸಿಎಮ್ ಕ್ಯಾಮರಾ ಜೊತೆಗೆ 50 ಕ್ಯಾಮರಾ ಟ್ರ್ಯಾಪ್ ಬಳಸಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಡಾ ಪಿ ರಮೇಶ್ ಕುಮಾರ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮೈಸೂರಲ್ಲಿ ಹುಲಿ ದಾಳಿಗೆ ಮತ್ತೊಂದು ಬಲಿ: ದನಗಾಹಿ ಮಹಿಳೆ ಕೊಂದು ತಿಂದ ವ್ಯಾಘ್ರ