ಮೈಸೂರು: ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್ನಲ್ಲಿ ರಾಜವಂಶಸ್ಥರ ದಸರಾ ಶರನ್ನವರಾತ್ರಿಯ ಪೂಜೆಗಾಗಿ ಜೋಡಿಸಲಾಗಿದ್ದ ರತ್ನಖಚಿತ ಸಿಂಹಾಸನವನ್ನು ಇದೀಗ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಧನುರ್ ಲಗ್ನದಲ್ಲಿ ವಿಸರ್ಜಿಸಿ ಅರಮನೆಯೊಳಗಿರುವ ಸ್ಟ್ರಾಂಗ್ ರೂಂನಲ್ಲಿ ಸಿಂಹಾಸನದ ಬಿಡಿಭಾಗಗಳನ್ನು ಭದ್ರಪಡಿಸಲಾಯಿತು.
![Throne of the palace](https://etvbharatimages.akamaized.net/etvbharat/prod-images/09-11-2023/ka-mys01-09-11-2023-palacenews-7208092_09112023110426_0911f_1699508066_227.jpg)
ರತ್ನಖಚಿತ ಸಿಂಹಾಸನ, ಬೆಳ್ಳಿಯ ಭದ್ರಾಸನ: ನಾಡಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರಿನ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲು ನೆಲಮಾಳಿಗೆಯ ಸ್ಟ್ರಾಂಗ್ ರೂಂನಲ್ಲಿ ಇರಿಸಿದ್ದ ರತ್ನಖಚಿತ ಸಿಂಹಾಸನದ ಬಿಡಿ ಭಾಗಗಳನ್ನು ಮತ್ತು ಬೆಳ್ಳಿಯ ಭದ್ರಾಸನದ ಬಿಡಿಭಾಗಗಳನ್ನು ಅಕ್ಟೋಬರ್ 9ರಂದು ಬೆಳಿಗ್ಗೆ ವಿವಿಧ ಹೋಮ-ಹವನಗಳನ್ನು ನೆರವೇರಿಸಿದ ಬಳಿಕ ಅರಮನೆಯ ದರ್ಬಾರ್ ಹಾಲ್ ಹಾಗೂ ಕನ್ನಡಿ ತೊಟ್ಟಿಯಲ್ಲಿ ಜೋಡಿಸಲಾಗಿತ್ತು. ಅದಾದ ನಂತರ, ಅಕ್ಟೋಬರ್ 15ರಿಂದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನವರಾತ್ರಿಯ ಸಂದರ್ಭದಲ್ಲಿ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನರೂಢರಾಗಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದ್ದರು. ಅಕ್ಟೋಬರ್ 23ರ ಆಯುಧ ಪೂಜೆಯ ದಿನ ಸಂಜೆ ಸಿಂಹಾಸನ ವಿಸರ್ಜನೆ ಮಾಡುವ ಮೂಲಕ ಖಾಸಗಿ ದರ್ಬಾರ್ಗೆ ತೆರೆ ಬಿತ್ತು.
![Throne of the palace](https://etvbharatimages.akamaized.net/etvbharat/prod-images/09-11-2023/ka-mys01-09-11-2023-palacenews-7208092_09112023110426_0911f_1699508066_516.jpg)
ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂ ಸೇರಿದ ಸಿಂಹಾಸನ: ಅಕ್ಟೋಬರ್ 24ರ ವಿಜಯ ದಶಮಿಯ ನಂತರ ಅರಮನೆಯ ದರ್ಬಾರ್ ಹಾಲ್ ಹಾಗೂ ಕನ್ನಡಿ ತೊಟ್ಟಿಯಲ್ಲಿ ಇರಿಸಲಾಗಿದ್ದ ಸಿಂಹಾಸನ ಮತ್ತು ಭದ್ರಾಸನವನ್ನು ಇಂದು ಸ್ವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಆಶ್ವಯುಜ ಮಾಸ, ಕೃಷ್ಣ ಪಕ್ಷ ದಶಮಿಯ ದಿನವಾದ ಅಕ್ಟೋಬರ್ 8ರ ಬೆಳಿಗ್ಗೆ 10.35 ರಿಂದ 10.45ರೊಳಗೆ ಇರುವ ಶುಭ ಧನುರ್ ಲಗ್ನದಲ್ಲಿ ವಿವಿಧ ಪೂಜೆ ಸಲ್ಲಿಸಿದ ಬಳಿಕ ಸಿಂಹಾಸನ ಮತ್ತು ಭದ್ರಾಸನದ ಬಿಡಿ ಭಾಗವನ್ನು ವಿಂಗಡಿಸಲಾಯಿತು. ಸಿಂಹಾಸನವನ್ನು 8 ಭಾಗಗಳಾಗಿ, ಭದ್ರಾಸನವನ್ನು 6 ಬಿಡಿ ಭಾಗಗಳಾಗಿ ವಿಂಗಡಿಸಿ, ಶಸ್ತ್ರ ಸಜ್ಜಿತ ಸಿಬ್ಬಂದಿಯ ಭದ್ರತೆಯಲ್ಲಿ ಅರಮನೆಯ ಸಿಬ್ಬಂದಿ ನೆಲಮಾಳಿಗೆಯಲ್ಲಿರುವ ಸ್ಟ್ರಾಂಗ್ ರೂಂಗೆ ಕೊಂಡೊಯ್ದರು.
![Throne of the palace](https://etvbharatimages.akamaized.net/etvbharat/prod-images/09-11-2023/ka-mys01-09-11-2023-palacenews-7208092_09112023110426_0911f_1699508066_1030.jpg)
ಎಂದಿನಂತೆ ಅರಮನೆಯ ದರ್ಬಾರ್ ಹಾಲ್, ಕನ್ನಡಿ ತೊಟ್ಟಿ ಹಾಗೂ ಸ್ಟ್ರಾಂಗ್ ರೂಂ ಸೇರಿದಂತೆ ಇನ್ನಿತೆರೆಡೆಗಳಲ್ಲಿ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳಿಗೂ ಪರದೆ ಮುಚ್ಚಲಾಗಿತ್ತು. ಬಿಡಿ ಭಾಗಗಳನ್ನು ಕೊಂಡೊಯ್ಯಲು ನೇಮಿಸಲಾಗಿದ್ದ ಸಿಬ್ಬಂದಿಯ ಮೊಬೈಲ್ ಫೋನ್ಗಳನ್ನು ಕೂಡ ಲಾಕರ್ನಲ್ಲಿ ಇಡಲಾಗಿತ್ತು.
ಇದನ್ನೂ ಓದಿ: ಮಂಡ್ಯ: ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋದ ರೈತರು