ಮೈಸೂರು: ಅರಮನೆ ಆವರಣದಲ್ಲಿ ಹೊಸ ವರ್ಷ ಹಾಗೂ ಕ್ರಿಸ್ಮಸ್ ಹಬ್ಬದ ನಿಮಿತ್ತ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.
ಇಂದಿನಿಂದ ಜನವರಿ 2 ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಉಚಿತ ಪ್ರವೆಶ ಇರಲಿದೆ. ನಿತ್ಯ ಸಂಜೆ 7 ರಿಂದ 8.30ರ ವರೆಗೆ ಅರಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲು ತೀರ್ಮಾನಿಸಲಾಗಿದ್ದು, ಈಗಾಗಲೇ ಅರಮನೆ ಆವರಣದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಎರಡು ಡೋಸ್ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ.
ಪುನೀತ್, ಬಿಪಿನ್ ರಾವತ್ಗೆ ನಮನ:
ಇತ್ತೀಚಿಗೆ ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಭಾರತೀಯ 3 ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹಾಗೂ ಹೃದಯಾಘಾತದಿಂದ ನಿಧನರಾದ ನಟ ಪುನೀತ್ ರಾಜಕುಮಾರ್ ಅವರಿಗೆ ಫಲಪುಷ್ಪ ಪ್ರದರ್ಶನದಲ್ಲಿ ವಿಶೇಷ ಪುಷ್ಪ ನಮನ ಸಲ್ಲಿಸಲಾಗಿದೆ.
ಗಮನ ಸೆಳೆದ ರಾಮ ಮಂದಿರ:
ಸುಮಾರು ಹತ್ತು ಲಕ್ಷ ಹೂವುಗಳಿಂದ ನಿರ್ಮಾಣ ಮಾಡಿರುವ 100 ಅಡಿ ಸುತ್ತಳತೆಯ, 30 ರಿಂದ 32 ಅಡಿ ಎತ್ತರದ, ಶ್ರೀ ರಾಮ ಮಂದಿರ ಈ ಬಾರಿಯ ಫಲ ಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿದೆ. ಇದರ ಜೊತೆಗೆ ಈ ವರ್ಷದ ಒಲಂಪಿಕ್ನಲ್ಲಿ ಚಿನ್ನದ ಪದಕ ಪಡೆದ ನೀರಜ್ ಚೋಪ್ರಾ, ಚಾಮುಂಡಿ ದೇವಸ್ಥಾನ, ಆನೆ ಖೆಡ್ಡಾ, ಪಲ್ಲಕ್ಕಿಯಲ್ಲಿ ಮಹಾರಾಣಿ, ಅಭಿನಂದನ್, ಮಹಾತ್ಮ ಗಾಂಧಿ, ಜಯಚಾಮರಾಜೇಂದ್ರ ಒಡೆಯರ್, ಸೆಲ್ಫಿ ಪಾಯಿಂಟ್ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಮೆಗಳನ್ನು ಪುಷ್ಪಗಳಿಂದ ನಿರ್ಮಾಣ ಮಾಡಲಾಗಿದೆ.
ಅಲಂಕಾರಿಕ ಹೂವಿನ ಕುಂಡ ಬಳಕೆ :
ಪ್ರದರ್ಶನದಲ್ಲಿ ಇಪ್ಪತ್ತು ಸಾವಿರ ತೋಟಗಾರಿಕೆ ಇಲಾಖೆಯ ಅಲಂಕಾರಿಕ ಹೂ ಕುಂಡಗಳು ಹಾಗೂ ಬೆಂಗಳೂರು ಮತ್ತು ಊಟಿಯಿಂದ ಸುಮಾರು 15,000 ಅಲಂಕಾರಿಕ ಹೂ ಕುಂಡಗಳನ್ನು ಬಳಸಲಾಗಿದೆ. ಈ ಫಲ ಪುಷ್ಪ ಪ್ರದರ್ಶನದಲ್ಲಿ 32 ಜಾತಿಯ ವಿವಿಧ ಹೂಗಳಿರುವ ಕುಂಡಗಳನ್ನು ಅಲಂಕಾರಕ್ಕಾಗಿ ಬಳಸಲಾಗಿದೆ. ಈ ಫಲ ಪುಷ್ಪ ಪ್ರದರ್ಶಶದ ಪ್ರಮುಖ ಆಕರ್ಷಣೆಗಳು, ಬಳಸಿರುವ ಹೂವುಗಳು ಸೇರಿದಂತೆ ಫಲ ಪುಷ್ಪ ಪ್ರದರ್ಶನದ ಬಗ್ಗೆ ಗುತ್ತಿಗೆದಾರ ಉಮಾಶಂಕರ್ 'ಈಟಿವಿ ಭಾರತ' ಕ್ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಎರಡು ತಿಂಗಳಲ್ಲಿ ಒಮಿಕ್ರಾನ್ ಸ್ಫೋಟ ಸಾಧ್ಯತೆ : ಡಾ. ಟಿ.ಎಸ್ ಅನೀಶ್