ಮೈಸೂರು: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. 'ದೇಶ ಮೊದಲು'ಎಂಬ ಸಂಕಲ್ಪವೇ ಸಾಕಲ್ಲವೇ ದೇಶವನ್ನು ಸಬಲೀಕರಣದತ್ತ ಕೊಂಡೊಯ್ಯಲು? ಅದಕ್ಕಾಗಿಯೇ ಆತ್ಮನಿರ್ಭರ ಭಾರತಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ರೈತರು, ಯುವಕರು, ಮಹಿಳೆಯರಿಗೆ ಆರ್ಥಿಕ ಬಲ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದ್ದು, ಇದಕ್ಕೆ ಪೂರಕವಾಗುವಂತೆ ರಾಜ್ಯ ಸರ್ಕಾರ ಹಾಗೂ ನಮ್ಮ ಸಹಕಾರ ಇಲಾಖೆ ಕೆಲಸ ಮಾಡಲಿದೆ. ಇಂತಹ ಒಂದು ಪರಿಣಾಮಕಾರಿ ಬಜೆಟ್ ಕೊಟ್ಟಿದ್ದಕ್ಕೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ನನ್ನ ಅಭಿನಂದನೆ ಎಂದಿದ್ದಾರೆ.
ಕೃಷಿ ಹಾಗೂ ರೈತರ ಅಭ್ಯುದಯ, ಉನ್ನತೀಕರಣಕ್ಕೆ ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿವೆ. ಇದು ಈ ಸಾಲಿನ ಬಜೆಟ್ ನಲ್ಲಿ ಗೋಚರಿಸಿದೆ. ರೈತರಿಗೆ ಆರ್ಥಿಕ ಬಲ, ಶಕ್ತಿ ತುಂಬಲು ಕನಿಷ್ಠ ಬೆಂಬಲ ಬೆಲೆ ನೀಡಲು ಬದ್ಧವಿದೆ ಎಂದು ಕೇಂದ್ರ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆಹಾರ ಧಾನ್ಯಗಳ ಖರೀದಿಗೆ 1,72,752 ರೂಪಾಯಿ ಮೀಸಲಿಡಲಾಗಿದೆ. ಸಾಮಾನ್ಯವಾಗಿ 1,41,930 ಕೋಟಿ ರೂಪಾಯಿಯನ್ನು ಆಹಾರ ಧಾನ್ಯಗಳ ಖರೀದಿಗೆ ಮೀಸಲಿಡಲಾಗುತ್ತಿತ್ತು. ಈ ಬಾರಿ ಹೆಚ್ಚಿನ ಹಣ ಮೀಸಲಿಟ್ಟಿದ್ದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಎಲ್ಲ ಬೆಳೆಗಳಿಗೆ ಒಂದೂವರೆ ಪಟ್ಟು ಹೆಚ್ಚು ಬೆಂಬಲ ಬೆಲೆ ಘೋಷಣೆ ಮಾಡಿರುವುದು ಐತಿಹಾಸಿಕ ಕ್ರಮವಾಗಿದೆ. ಇದರಿಂದ ದೇಶದ 1.54 ಕೋಟಿ ರೈತರಿಗೆ ನೇರ ಉಪಯೋಗವಾಗಲಿದೆ. 2013-14ರ ಸಾಲಿಗೆ ಇದನ್ನು ಹೋಲಿಸಿದರೆ ಶೇ.40ಕ್ಕಿಂತ ಹೆಚ್ಚು ರೈತರಿಗೆ ಇದರಿಂದ ಅನುಕೂಲವಾದಂತಾಗಿದೆ. ಈ ಮೂಲಕ ನಮ್ಮ ಮೂಲ ಮಂತ್ರವಾದ ರೈತರ ಆದಾಯ ದ್ವಿಗುಣಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನು ನಮ್ಮ ಸರ್ಕಾರಗಳು ತೆಗೆದುಕೊಳ್ಳುತ್ತವೆ ಎಂಬುದನ್ನು ಎತ್ತಿ ತೋರಿಸಿದಂತಾಗಿದೆ ಎಂದಿದ್ದಾರೆ.
ಎಪಿಎಂಸಿಗಳ ಉನ್ನತೀಕರಣಕ್ಕೆ ಆದ್ಯತೆ: ಎಪಿಎಂಸಿಗಳ ಉನ್ನತೀಕರಣಕ್ಕಾಗಿ ಹಾಗೂ ಮೂಲಸೌಕರ್ಯ ವೃದ್ಧಿಸುವ ಬಗ್ಗೆಯೂ ಕೇಂದ್ರ ಸರ್ಕಾರ ಘೋಷಣೆ ಮಾಡುವ ಮೂಲಕ ರೈತರ ಪರ ನಮ್ಮ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 1 ಸಾವಿರ ಎಪಿಎಂಸಿ ಮಂಡಿಗಳಿಗೆ ಇನಾಮ್ ವಿಸ್ತರಣೆ ಮಾಡಲಾಗಿದ್ದು, ಇದರಡಿ ನಮ್ಮ ಎಪಿಎಂಸಿಗಳು ಬರಲಿವೆ ಎಂಬುದನ್ನು ಪರಿಶೀಲನೆ ಮಾಡಲಾಗುವುದು. ನಮ್ಮ ರಾಜ್ಯದ ಎಪಿಎಂಸಿ ಮಂಡಿಗಳು ಆಯ್ಕೆಯಾಗಿದ್ದರೆ ತ್ವರಿತ ಫಲ ಸಿಕ್ಕುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕೃಷಿ ಸಾಲಕ್ಕೂ ಆದ್ಯತೆ; ಸ್ವಾಗತಾರ್ಹ: ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಆರ್ಥಿಕ ಬಲ ತುಂಬಲು ಕೃಷಿ ಸಾಲವಾಗಿ 16.5 ಲಕ್ಷ ಕೋಟಿ ಮೀಸಲಿಡಲಾಗಿದೆ. ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ ಸಹ ಕೇಂದ್ರ ಸರ್ಕಾರವು ಅನುದಾನವನ್ನು ಮೀಸಲಿಡುತ್ತಿರುವುದು ಸ್ವಾಗತಾರ್ಹ ಕ್ರಮವಾಗಿದ್ದು, ಇವುಗಳಲ್ಲಿ ರಾಜ್ಯಕ್ಕೆ ಬರಬಹುದಾದ ಅನುದಾನಗಳಿಗೆ ಕ್ರಮವಹಿಸಲಾಗುವುದು ಎಂದಿದ್ದಾರೆ.
ಬೆಂಗಳೂರು ಅಭಿವೃದ್ಧಿಗೂ ಒತ್ತು: ಬೆಂಗಳೂರು ಅಭಿವೃದ್ಧಿಗೂ ಸಹ ಕೇಂದ್ರ ಸರ್ಕಾರ ಗಮನಹರಿಸುವ ಮೂಲಕ ಬೆಂಗಳೂರು ಮೆಟ್ರೋಗಾಗಿ 14,788 ಕೋಟಿ ರೂಪಾಯಿಯನ್ನು ಮೀಸಲಿಟ್ಟಿರುವುದು ಹೆಮ್ಮೆಯ ವಿಚಾರ. ಈ ಮೂಲಕ ರಾಜಧಾನಿಯ ಅಭಿವೃದ್ಧಿ ಜೊತೆಗೆ ನನ್ನ ಕ್ಷೇತ್ರದ ಜನರಿಗೂ ಉಪಯೋಗವಾಗಲಿದೆ ಎಂಬುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದ್ದಾರೆ.
ಓದಿ: ಕೃಷಿ ಕ್ಷೇತ್ರಕ್ಕೆ ನಿರಾಶಾದಾಯಕ ಬಜೆಟ್: ಕುರುಬೂರು ಶಾಂತಕುಮಾರ್
ಆತ್ಮನಿರ್ಭರ ಭಾರತ ಸಮರ್ಪಕ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ಧ: ಉತ್ಪಾದನಾ ಕ್ಷೇತ್ರಕ್ಕೂ ಸಹ ಆತ್ಮನಿರ್ಭರ ಭಾರತ ಅಡಿ ಅನುದಾನಗಳನ್ನು ಮೀಸಲಿಟ್ಟಿದೆ. ಒಟ್ಟಾರೆಯಾಗಿ 27 ಲಕ್ಷ ಕೋಟಿ ರೂಪಾಯಿಯನ್ನು ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದು, 5 ವರ್ಷಗಳ ಅವಧಿಯಲ್ಲಿ ಹಂತ - ಹಂತವಾಗಿ ಅನುದಾನ ನೀಡಿ ಆರ್ಥಿಕ ಸ್ಥಿತಿಯನ್ನು ಚೇತರಿಸುವ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸಹಕಾರ ಇಲಾಖೆ ಮೂಲಕ ಇದರ ಅನುಷ್ಠಾನ ಮಾಡುವಲ್ಲಿ ನಾವು ನೂರಕ್ಕೆ ನೂರು ಶ್ರಮವಹಿಸುತ್ತೇವೆ. ಒಟ್ಟಿನಲ್ಲಿ ಕೇಂದ್ರ ಸರ್ಕಾರ ನಾಗರಿಕರ ಅನುಕೂಲಕ್ಕಾಗಿ ಈ ಸಾಲಿನ ಆಯ-ವ್ಯಯದಲ್ಲಿ ಮೀಸಲಿಟ್ಟ ಎಲ್ಲ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಹಾಗೂ ಕಾರ್ಯಗತಕ್ಕೆ ನಮ್ಮ ರಾಜ್ಯ ಸರ್ಕಾರ ಕಟಿಬದ್ಧವಾಗಿದೆ ಎಂದಿದ್ದಾರೆ.
ಭವಿಷ್ಯದ ಭಾರತ ನಿರ್ಮಾಣಕ್ಕೆ ಈ ಬಜೆಟ್ ಬುನಾದಿ: ಕೊನೆಯದಾಗಿ ಹೇಳುವುದಾದರೆ ಇದು ದೂರದೃಷ್ಟಿಯುಳ್ಳ ಹಾಗೂ ಭವಿಷ್ಯದ ಭಾರತ ನಿರ್ಮಾಣಕ್ಕೆ ಪೂರಕವಾಗಿದೆ ಎಂಬುದನ್ನು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಇಂತಹ ಒಂದು ಉತ್ತಮ ಬಜೆಟ್ ನೀಡಿದ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.