ಮೈಸೂರು: ಮೈಸೂರು ದಸರಾ ಭಾರತದ ಸಂಸ್ಕೃತಿಯ ನಿದರ್ಶನವಾಗಿದೆ. ಮಹಿಷಾಸುರನ ಸಂಹಾರ ಮಾಡಿದ ಚಾಮುಂಡಿ ಮಹಿಳಾ ಶಕ್ತಿಯ ಪ್ರತೀಕವಾಗಿದ್ದಾಳೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉದ್ಘಾಟನಾ ಭಾಷಣದಲ್ಲಿ ಬಣ್ಣಿಸಿದರು.
ಸೋಮವಾರ ಚಾಮುಂಡಿ ಬೆಟ್ಟದಲ್ಲಿ ನಾಡಹಬ್ಬ ದಸರಾವನ್ನು ರಾಷ್ಟ್ರಪತಿ ಉದ್ಘಾಟನೆ ಮಾಡಿದರು. ಬಳಿಕ ಅವರು ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯಪೂರ್ವಕ ನಮಸ್ಕಾರಗಳು ಎಂದು ಕನ್ನಡದಲ್ಲಿ ಎರಡು ವಾಕ್ಯ ಹೇಳಿದರು. ಆ ನಂತರ ಸಂಸ್ಕೃತದ ಚಾಮುಂಡೇಶ್ವರಿ ಶ್ಲೋಕ ಪಠಿಸಿದರು. ಬಳಿಕ ಅವರ ಭಾಷಣವನ್ನು ಆರಂಭಿಸಿದರು.
ದೇಶಕ್ಕೆ ಕಾಳರಾತ್ರಿಯ ಶುಭ ಕೋರಿದರು. ಮೈಸೂರು ದಸರಾ ಭಾರತದ ಸಂಸ್ಕೃತಿಯ ನಿದರ್ಶನವಾಗಿದೆ. ಮಹಿಷಾಸುರನನ್ನು ಕೊಂದ ಚಾಮುಂಡಿ ನೋಡಲು ದೂರದ ಊರುಗಳಿಂದ ಜನರು ಬರುತ್ತಾರೆ. ರಾಮಯಣ, ಮಹಾಭಾರತದಲ್ಲಿ ಚಾಮುಂಡಿ ತಾಯಿಯ ಆರಾಧನೆ ಬಗ್ಗೆ ಉಲ್ಲೇಖವಿದೆ. 12ನೇ ಶತಮಾನದಲ್ಲಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಭಕ್ತಿ ಮಾರ್ಗ ತೋರಿಸಿ, ಆಧ್ಯಾತ್ಮಿಕ ಮಾರ್ಗವನ್ನು ಭೋದಿಸಿದರು. ಭಕ್ತಿ, ಸಮಾನತೆ, ಮಾನವತಾ ಸಂಸ್ಕೃತಿಗೆ ಕರ್ನಾಟಕವು ಹೆಸರುವಾಸಿಯಾಗಿದೆ ಎಂದರು.
ಮಹಿಷಾಸುರ, ಚಂಡ- ಮುಂಡರನ್ನು ಸಂಹಾರ ಮಾಡಿದ ಚಾಮುಂಡಿ ಮಹಿಳಾ ಶಕ್ತಿಯ ಪ್ರತೀಕವಾಗಿದ್ದಾಳೆ. ಇದು ವಿಜಯ ದಶಮಿಯ ಮೂಲಭಾವನೆಯಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಮಹಿಳಾ ಸಾಮರ್ಥ್ಯದ ಹೆಜ್ಜೆ ಗುರುತು ಮೂಡಿಸಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಕನ್ನಡದ ಮಹನಿಯರನ್ನು ನೆನೆದರು.
ಇದನ್ನೂ ಓದಿ: ಮೈಸೂರು ದಸರಾ.. ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ
ನನಗೆ ಈ ಪರಂಪರೆಯೊಂದಿಗೆ ಜೋಡಣೆಯಾಗಲು ಅವಕಾಶಕೊಟ್ಟಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದಗಳು. ಅತಿವೃಷ್ಟಿಯಿಂದ ರಾಜ್ಯದಲ್ಲಿ ಅನಾಹುತಗಳು ಸಂಭವಿಸಿವೆ. ರಾಜ್ಯ ಸರ್ಕಾರವು ಅದನ್ನು ನಿರ್ವಹಿಸಲು ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸಮೃದ್ಧಿ ನೆಲೆಸಲಿ ಎಂದು ದ್ರೌಪದಿ ಮುರ್ಮು ಆಶಯ ವ್ಯಕ್ತಪಡಿಸಿದರು. ಬಳಿಕ ಜೈ ಕರ್ನಾಟಕ ಎಂದು ಘೋಷಿಸುವ ಮೂಲಕ ರಾಷ್ಟ್ರಪತಿ ಭಾಷಣ ಮುಗಿಸಿದರು.