ಮೈಸೂರು: ಕೆಪಿಸಿಸಿ ಅಧ್ಯಕ್ಷರು ದೊಡ್ಡವರಿದ್ದಾರೆ ಅವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಮೈಸೂರು - ಬೆಂಗಳೂರು ನಾಲ್ಕು ಪಥದ ರಸ್ತೆ ಮಾಡಿದ್ದು ನಾವು. ಆದರೆ, ಅದರ ಕ್ರೆಡಿಟ್ ಅನ್ನು ಯಾರೋ ಪಡೆದುಕೊಳ್ಳುತ್ತಿದ್ದಾರೆ. ನಾವು ಅವರ ಹಾಗೆ ಬೊಬ್ಬೆ ಹೊಡೆಯುವುದಿಲ್ಲ. ನಾವು ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವುದಿಲ್ಲ. ಅವರ ಪಕ್ಷದ ಬಗ್ಗೆ ಅವರೇ ಮಾತನಾಡುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದ್ದಾರೆ.
ಇಬ್ರಾಹಿಂ ಎಲ್ಲಿರುತ್ತಾರೋ ಅಲ್ಲಿ ಅಧಿಕಾರ ಬರುತ್ತೆ: ಸಿಎಂ ಇಬ್ರಾಹಿಂ ಎಲ್ಲಿ ಇರುತ್ತಾರೋ ಅಲ್ಲಿ ಅಧಿಕಾರ ಬರುತ್ತೆ ಎಂಬುದು ಸಾಬೀತಾಗಿದೆ. ನನ್ನ ಅಧಿಕಾರಕ್ಕಿಂತ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಬೇಕು ಎಂಬುದು ಅವರ ಅಭಿಲಾಷೆ. ಅದಕ್ಕಾಗಿ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ಇಬ್ರಾಹಿಂ ಅವರು ನಮ್ಮ ಮನೆಯವರಿದ್ದಂತೆ, ಅವರನ್ನು ನಾವು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಜಿಟಿ ದೇವೇಗೌಡ ಕೂಡ ನಮ್ಮ ಕುಟುಂಬದವರು. ಅವರೂ ಕೂಡ ಎಲ್ಲಿಯೂ ಹೋಗುವುದಿಲ್ಲ ನಮ್ಮ ಜೊತೆಗಿರುತ್ತಾರೆ ಎಂದು ರೇವಣ್ಣ ಹೇಳಿದರು.
ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದು ದೇವೇಗೌಡರು: ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದ್ದು, ಹೆಚ್.ಡಿ. ದೇವೇಗೌಡರು. ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ನಾವು ಮಾತನಾಡುವುದಿಲ್ಲ. ರಾಜ್ಯವನ್ನು ಉಳಿಸಿಕೊಳ್ಳುವುದು ನಮ್ಮ ಆದ್ಯತೆ. 50 ವರ್ಷದಲ್ಲಿ ಮಾಡದೇ ಇದ್ದದ್ದನ್ನು ಕುಮಾರಸ್ವಾಮಿ ಮಾಡಿ ತೋರಿಸಿದ್ದಾರೆ ಎಂದು ಎಚ್ ಡಿ ರೇವಣ್ಣ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕೆಸಿಆರ್ ಭೇಟಿ: ದೇವೇಗೌಡರ ನಿವಾಸದಲ್ಲಿ ಬಿರಿಯಾನಿ, ನಾಟಿ ಕೋಳಿ ಸಾರಿನ ಘಮಲು
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅತಿ ಹೆಚ್ಚು ಅಭಿವೃದ್ಧಿ: ಕುಮಾರಸ್ವಾಮಿಯವರು 20 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಅತಿ ಹೆಚ್ಚು ಅಭಿವೃದ್ಧಿಯಾಗಿದೆ. ಹೆಚ್ಚೆಚ್ಚು ಶಾಲಾ ಕಾಲೇಜುಗಳನ್ನು ತೆರೆದಿದ್ದರು. ಕುಮಾರಸ್ವಾಮಿಯವರು ಶಿಕ್ಷಣದಲ್ಲಿ ಕ್ರಾಂತಿಕಾರಿ ಯೋಜನೆ ಜಾರಿಗೆ ತಂದಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು.