ಮೈಸೂರು: ಜುಬಿಲಿಯಂಟ್ ಕಾರ್ಖಾನೆ ವಿರುದ್ಧದ ತನಿಖೆ ಪೂರ್ಣಗೊಂಡು, ವರದಿ ಕೈ ಸೇರುವವರೆಗೂ ಕಾರ್ಖಾನೆಯನ್ನು ತೆರೆಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ನಗರದ ಆರ್ಎಸ್ಎಸ್ ಕಚೇರಿಗೆ ಭೇಟಿ ನೀಡಿದ್ದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಸನ್ನಿವೇಶದಲ್ಲಿ ಕಾರ್ಖಾನೆ ತೆರೆದರೆ ಕಾರ್ಮಿಕರು ನಿರಾಳವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಅಲ್ಲಿ ಕೆಲಸ ಮಾಡುವ ಗುತ್ತಿಗೆ ಹಾಗೂ ಖಾಯಂ ನೌಕರರು ಸೇರಿದಂತೆ ಎಲ್ಲರಿಗೂ ಸಂಬಳ ನೀಡುವಂತೆ ಸರ್ಕಾರ ಆದೇಶ ನೀಡಿದೆ ಎಂದರು.
ಜಿಲ್ಲೆಯ 48 ಕೊರೊನಾ ಸೋಂಕಿತರ ಪೈಕಿ 12 ಜನರು ಗುಣಮುಖರಾಗಿದ್ದಾರೆ. ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುತ್ತಾರೆ. ಕೋವಿಡ್-19ಗಾಗಿ ನೇಮಿಸಿರುವ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಆರ್ಎಸ್ಎಸ್ಗೆ ಸಚಿವರ ಅಭಿನಂದನೆ: ಲಾಕ್ಡೌನ್ ಹಿನ್ನೆಲೆ ಆಹಾರವಿಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ, ಬಡವರಿಗೆ ಆರ್ಎಸ್ಎಸ್ ಸಂಘಟಕರು ಆಹಾರ, ದಿನಸಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳು ಸಹಾಯ ಮಾಡುತ್ತಿದ್ದು, ಅವರಿಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಸರ್ಕಾರದ ಆದೇಶದ ಅನ್ವಯ ಕಾರ್ಯನಿರ್ವಹಿಸಿ, ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎಂದು ಅವರು ಇದೇ ವೇಳೆ ಹೇಳಿದ್ರು.