ಮೈಸೂರು: ಸರಳ ದಸರಾ ಆಚರಣೆ ಮಾಡುತ್ತಿರುವುದು ಒಳ್ಳೆಯದೇ ಆದರೆ, ಪ್ರವಾಸೋದ್ಯಮವನ್ನು ನಂಬಿ ಬದುಕುತ್ತಿರುವ ಜನರಿಗೆ ಸರ್ಕಾರ ಏನಾದರೂ ಮಾಡಬೇಕು ಎಂದು ರಾಜವಂಶಸ್ಥ ಯದುವೀರ್ ಹೇಳಿಕೆ ನೀಡಿದ್ದಾರೆ.
ಇಂದು ಅರಮನೆಯ ಆಡಳಿತ ಮಂಡಳಿಯಿಂದ ಹಾಗೂ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಅರಮನೆ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸ್ವತಃ ಯದುವೀರ್ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಉದ್ಘಾಟನೆ ಮಾಡಿ ನಂತರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು.
ಅರಮನೆಯಲ್ಲಿ ಗಣೇಶ ಹಬ್ಬದ ನಂತರ ದಸರ ಸಿದ್ದತೆಗಳನ್ನು ಮಾಡಿಕೊಳ್ಳಲಾಗುವುದು. ಜಿಲ್ಲಾಡಳಿತ ಅರಮನೆಗೆ ಆಹ್ವಾನ ನೀಡುತ್ತೆ. ಆಗ ಅಧಿಕೃತವಾಗಿ ದಸರಾ ಆರಂಭ ಆಗುತ್ತದೆ. ಆದರೆ, ಈ ಬಾರಿ ನಮ್ಮ ರಾಜ್ಯದಲ್ಲಿ ಪ್ರವಾಹದಿಂದ ಹಲವಾರು ಜನ ಸಂಕಷ್ಟದಲ್ಲಿ ಇದ್ದಾರೆ. ಆದ್ದರಿಂದ ಸರ್ಕಾರ ಈ ಬಾರಿ ದಸರಾವನ್ನು ಸರಳವಾಗಿ ಆಚರಿಸುತ್ತೇವೆ ಎಂದು ಹೇಳಿದ್ದಾರೆ.
ಪ್ರವಾಸೋದ್ಯಮ ಹಾಗೂ ಹೋಟೆಲ್ ಉದ್ಯಮ ನಂಬಿಕೊಂಡು ಬದುಕುವ ಇಲ್ಲಿನ ಜನರಿಗೆ ಸರಳ ದಸರಾ ತೊಂದರೆಯನ್ನುಂಟು ಮಾಡುತ್ತದೆ. ಇದಕ್ಕೆ ಸರ್ಕಾರ ಏನಾದರೂ ಉಪಾಯ ಮಾಡಬೇಕು. ಪ್ರತಿಬಾರಿ ಹೇಗೆ ಆಚರಿಸಿಕೊಂಡು ಹೋಗುತ್ತೇವೊ ಅದೇ ರೀತಿ ಆಚರಿಸಿಕೊಂಡು ಹೋದರೆ ಒಳ್ಳೆಯದು ಎಂದು ಯದುವೀರ್ ಇದೇ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.