ಮೈಸೂರು: ದೋಸ್ತಿ ಸರ್ಕಾರ ಪತನಕ್ಕೆ ನಾವು ಕಾರಣರಲ್ಲ ಹಾಗೂ ಬಿಜೆಪಿಯೂ ಕಾರಣವಲ್ಲ. ಸರ್ಕಾರ ನಡೆಸುತ್ತಿದ್ದ ನಾಯಕರೇ ಕಾರಣ. ನಮ್ಮನ್ನು ಉದಾಸೀನ ಮಾಡಿದ್ದಕ್ಕೆ ರಾಜೀನಾಮೆ ನೀಡಿದ್ದು ಎಂದು ಹೆಚ್.ವಿಶ್ವನಾಥ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎನ್ನುವುದು ಸಿದ್ದು ಶಿಷ್ಯರ ಆಶಯವಾಗಿತ್ತು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿತ್ತು ಎಂದು ಹೇಳಿದರು.
ಸದನದಲ್ಲಿ ಹಾಜರಿರದ್ದವರ ಬಗ್ಗೆ ಮಾತನಾಡಲು ಅನುಮತಿ ನೀಡಿದ ಸ್ಪೀಕರ್ ಸಂವಿಧಾನ ಉಲ್ಲಂಘಿಸಿದ್ದಾರೆ. ನಾವು ಹಣ, ಅಧಿಕಾರಕ್ಕಾಗಿ ರಾಜೀನಾಮೆ ನೀಡಿಲ್ಲ. ದೋಸ್ತಿ ಸರ್ಕಾರದಲ್ಲಿ ಅಧಿಕಾರದಲ್ಲಿದ್ದವರ ತಪ್ಪು ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸೋಲಿನ ಹೊಣೆ ಹೊತ್ತು ನಾವು ರಾಜೀನಾಮೆ ನೀಡಿದ್ದೆವು. ಸಿದ್ದರಾಮಯ್ಯನವರು ಮಾತ್ರ ನೀಡಲಿಲ್ಲ. ಎರಡೂ ಪಕ್ಷಗಳು ಸೋಲಿನ ಕುರಿತು ಅವಲೋಕನ ಮಾಡಬೇಕಿತ್ತು ಎಂದು ಕುಟುಕಿದರು.
ಸಿದ್ದರಾಮಯ್ಯನಿಂದ ಕಾಂಗ್ರೆಸ್ ಬಿಟ್ಟೆ: ಕಾಂಗ್ರೆಸ್ ನನಗೆ ತಾಯಿ ಸಮಾನ. ಸಿದ್ದರಾಮಯ್ಯ ಕಾಟದಿಂದ ಜೆಡಿಎಸ್ಗೆ ಬಂದೆ. ಅಲ್ಲಿಯೂ ಅವರಿಂದ ತೊಂದರೆ ತಪ್ಪಲಿಲ್ಲ. ಕಾಂಗ್ರೆಸ್ ಶಾಸಕಾಂಗ ಸಭೆಗೆ ಬರಬೇಡಿ. ಸಿದ್ದರಾಮಯ್ಯ ಇದ್ದಾರೆ ಎಂದು ನನಗೆ ಹೇಳುತ್ತಿದ್ದರು. ಇವೆಲ್ಲ ಘಟನೆಗಳಿಂದ ಬೇಸರವಾಗಿ ಹೊರ ಬಂದೆ ಎಂದರು.
ನೀನೊಬ್ಬ ಸಚಿವನಾ?: ಸುಳ್ಳಿನ ಕಂತೆ ಹೇಳುವ ಮಾಜಿ ಸಚಿವ ಸಾ.ರಾ.ಮಹೇಶ್ ಏನೆಂಬುದು ಗೊತ್ತಿದೆ. ಇಂತವರೆಲ್ಲ ರಾಜ್ಯದ ಸಚಿವರಾಗಿದ್ದಾರೆ. ಸದನದಲ್ಲಿ ಮಾತನಾಡಿದರೆ ಯಾರೂ ಕೇಳಲ್ಲ. ಹೊರಗೆ ಬಂದು ಮಾತನಾಡಿ ಎಂದು ಸಾ.ರಾ.ಮಹೇಶ್ ಅವರಿಗೆ ಸವಾಲು ಹಾಕಿದರು.