ಮೈಸೂರು : ನಾಳೆ ಬೆಳಗ್ಗೆ 10:15 ರಿಂದ 10:30 ರ ಶುಭ ವೃಶ್ಚಿಕ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ವಿಧ್ಯುಕ್ತ ಚಾಲನೆ ಸಿಗಲಿದ್ದು, ಇದಕ್ಕಾಗಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಸಿದ್ಧಮಾಡಲಾಗಿದೆ.
ಅಕ್ಟೋಬರ್ 15 ರಂದು ಚಾಮುಂಡಿ ಬೆಟ್ಟದಲ್ಲಿ ನಿರ್ಮಿಸಲಾಗಿರುವ ವಿಶೇಷ ಉದ್ಘಾಟನಾ ಸಮಾರಂಭದಲ್ಲಿ ಬೆಳ್ಳಿಯ ಪಲ್ಲಕ್ಕಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪನೆ ಮಾಡಿ, ಹಂಸಲೇಖ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಬೆಳಗ್ಗೆ 10:15 ರಿಂದ 10:30 ರಲ್ಲಿ ಜರುಗುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ದಸರಾಗೆ ಚಾಲನೆ ನೀಡಲಾಗುವುದು. ಇದಕ್ಕಾಗಿ ಅರಮನೆಯಿಂದ ತಂದ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಸ್ವಚ್ಛಗೊಳಿಸಿ ನಾಳಿನ ಉದ್ಘಾಟನಾ ಸಮಾರಂಭಕ್ಕೆ ಸಿದ್ಧಗೊಳಿಸಲಾಗಿದೆ. 9 ದಿನಗಳು ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಲಾಗುವುದು ಎಂದು ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಹೇಳಿದ್ದಾರೆ.
ಉದ್ಘಾಟನೆಗೆ ವೇದಿಕೆ ಸಿದ್ಧ : ಈ ಬಾರಿಯ ಸಾಂಪ್ರದಾಯಿಕ ದಸರಾ ಉದ್ಘಾಟನಾ ಕಾರ್ಯಕ್ರಮವನ್ನು ಅಕ್ಟೋಬರ್ 15 ರ ಭಾನುವಾರ ಬೆಳಗ್ಗೆ ಚಾಮುಂಡಿ ಬೆಟ್ಟದ ದೇವಾಲಯದ ಪಕ್ಕ ನಿರ್ಮಾಣವಾಗುತ್ತಿರುವ ವೇದಿಕೆಯಲ್ಲಿ ಹಂಸಲೇಖ ಅವರು ಚಾಲನೆ ನೀಡಲಿದ್ದಾರೆ. ಅದಕ್ಕೂ ಮುನ್ನ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಪೂಜೆ ಸಲ್ಲಿಸಿದ ಬಳಿಕ ವೇದಿಕೆಗೆ ಆಗಮಿಸಲಿದ್ದು, ಇದಕ್ಕಾಗಿ ವೇದಿಕೆ ಸಿದ್ಧವಾಗುತ್ತಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಸಹ ಮಾಡಲಾಗಿದೆ.
ಇದನ್ನೂ ಓದಿ : ಎರಡನೇ ಹಂತದ ಕುಶಾಲತೋಪು ಸಿಡಿಮದ್ದು ಯಶಸ್ವಿ : 5 ಆನೆಗಳು ಗೈರು - ರಂಪಾಟ ಮಾಡಿದ ಕುದುರೆ
ಬಿಗಿ ಪೊಲೀಸ್ ಬಂದೋಬಸ್ತ್ : ಮುಂಜಾಗ್ರತಾ ಕ್ರಮವಾಗಿ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟನಾ ವೇದಿಕೆ ಹಾಗೂ ದೇವಾಲಯದ ಸುತ್ತಮುತ್ತ ವಿಶೇಷವಾದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ವೇದಿಕೆ ಕಾರ್ಯಕ್ರಮದ ಸುತ್ತ ಡಾಗ್ ಸ್ಕ್ವಾಡ್ ಪರಿಶೀಲನೆ ನಡೆಸಿದ್ದು, ನಾಳೆ ಬೆಳಗ್ಗೆ ದಸರಾಗೆ ಚಾಲನೆ ಸಿಗಲಿದೆ. ಇತರ ದಸರಾ ಕಾರ್ಯಕ್ರಮಗಳಾದ ಚಲನಚಿತ್ರೋತ್ಸವ, ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ದಸರಾ ಕುಸ್ತಿ ಪಂದ್ಯಾವಳಿ, ದಸರಾ ವಸ್ತು ಪ್ರದರ್ಶನ, ಯೋಗ ದಸರಾ, ರಾಜ್ಯ ಮಟ್ಟದ ಶಿಲ್ಪ ಕಲಾ ಪ್ರದರ್ಶನ, ದೀಪಾಲಂಕಾರ ಸೇರಿದಂತೆ ಹಲವು ಕಾರ್ಯಕ್ರಮಗಳು ಸಹ ಉದ್ಘಾಟನೆ ಆಗಲಿವೆ.
ಇದನ್ನೂ ಓದಿ : ಅ.16 ಕ್ಕೆ ನಟಿ ಮಿಲನ ನಾಗರಾಜ್ರಿಂದ ಮೈಸೂರು ದಸರಾ ಚಲನಚಿತ್ರೋತ್ಸವ ಉದ್ಘಾಟನೆ
ಸಂಜೆ ಅರಮನೆಯ ಮುಂಭಾಗದ ವೇದಿಕೆ ಕಾರ್ಯಕ್ರಮದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಸಮಾರಂಭವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ.
ಇದನ್ನೂ ಓದಿ : ಮಹಿಷಾ ದಸರಾ , ಚಲೋ ಜಾಥಾಗೆ ನಿರಾಕರಣೆ : ಚಾಮುಂಡಿ ಬೆಟ್ಟ ಹಾಗೂ ಮೈಸೂರು ನಗರದಲ್ಲಿ ನಿಷೇದಾಜ್ಞೆ, ಬಿಗಿ ಬಂದೋಬಸ್ತ್