ಮೈಸೂರು : ಅರಣ್ಯ ಇಲಾಖೆ ಹಂಗಾಮಿ ಜೀಪ್ ಚಾಲಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಹೆಚ್.ಡಿ ಕೋಟೆ ತಾಲೂಕಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಸಿಂಗರ ಮಾರನಹಳ್ಳಿ ಗ್ರಾಮದ ವಿನೋದ್ (24) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮೇಲಾಧಿಕಾರಿಗಳ ಕಿರುಕುಳದಿಂದ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗಿದೆ.
ವಿನೋದ್ ಹೆಚ್.ಡಿ.ಕೋಟೆ ಹ್ಯಾಂಡ್ ಪೋಸ್ಟ್ನ ಅರಣ್ಯ ಇಲಾಖೆ ವಸತಿ ಗೃಹದಲ್ಲಿ ಕ್ರಿಮಿನಾಶಕ ಸೇವಿಸಿದ್ದಾನೆ. ಈ ವೇಳೆ, ಪ್ರಜ್ಞಾಹೀನನಾಗಿದ್ದ ವಿನೋದ್‌ನನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಲ್ಲಿನ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಈ ಬಗ್ಗೆ ಡಿಆರ್ಎಫ್ಒ ಹೇಳಿದ್ದಿಷ್ಟು: ಈ ಸಂಬಂಧ ಪ್ರತಿಕ್ರಿಯಿಸಿರುವ ಡಿಆರ್ಎಫ್ಒ ನವೀನ್, ’’ಜೀಪ್ ಟೈರ್ ಪಂಚರ್ ಆಗಿದ್ದ ಹಿನ್ನೆಲೆ ನಾನು ವಿನೋದ್ಗೆ, ನಮಗೆ ಗೊತ್ತಿಲ್ಲ, ನೀವೇ ಪಂಚರ್ ಹಾಕಿಸಬೇಕು ಎಂದು ಸುಮ್ಮನೆ ಗದರಿಸಿದೆ. ಅಷ್ಟಕ್ಕೆ ವಿನೋದ್ ನನ್ನ ವಿರುದ್ಧ ದೂರು ನೀಡಲು ಕಚೇರಿಗೆ ತೆರಳಿದ್ದರು. ಕಚೇರಿಯಲ್ಲಿ ಏನಾಗಿದೆ ಗೊತ್ತಿಲ್ಲ. ಬಳಿಕ ಇಲ್ಲಿನ ವಸತಿಗೃಹಕ್ಕೆ ಬಂದಿದ್ದಾರೆ. ಈ ವೇಳೆ, ನಾನು ಕಾಫಿ ಕುಡಿಯಲು ಹೋಗಿದ್ದೆ. ನಾನು ಬರುವಷ್ಟರಲ್ಲಿ ವಿಷ ಸೇವಿಸಿದ್ದಾನೆ‘‘ ಎಂದು ಹೇಳಿದರು. ’’ನಾನು ಅವರ ಮೇಲೆ ಹಲ್ಲೆ ಮಾಡಿಲ್ಲ. ನಮಗೆ ಹಲ್ಲೆ ಮಾಡುವ ಯಾವುದೇ ಹಕ್ಕಿಲ್ಲ. ಬುಧವಾರ ಸಂಜೆ 5.45 ಸುಮಾರಿಗೆ ವಿಷ ಸೇವಿಸಿದ್ದಾರೆ. ಈ ಬಗ್ಗೆ ತಿಳಿದ ತಕ್ಷಣ ಅವರನ್ನು ಇಲ್ಲಿನ ಆಸ್ಪತ್ರೆಗೆ ದಾಖಲಿಸಿದೆವು‘‘ ಎಂದು ಹೇಳಿದರು.
ಇದನ್ನೂ ಓದಿ : ಮರ್ಯಾದಾ ಹತ್ಯೆ: ಕೋಳಿ ಕಟ್ ಮಾಡುವ ಚಾಕುವಿನಿಂದ ಮಗಳ ಕತ್ತು ಕೊಯ್ದು ಕೊಲೆ!
ಆತ್ಮಹತ್ಯೆಗೆ ಯತ್ನಿಸಿದ್ದ ಸರ್ಕಾರಿ ಬಸ್ ಚಾಲಕ( ಮಂಡ್ಯ) : ವರ್ಗಾವಣೆಗೆ ಮನನೊಂದು ಚಾಲಕ ಕಂ ನಿರ್ವಾಹಕ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದ ಕೆಎಸ್ಆರ್ಟಿಸಿ ಬಸ್ ಡಿಪೋದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ನಡೆದಿತ್ತು. ನಾಗಮಂಗಲದ ಕೆಎಸ್ಆರ್ಟಿ ಬಸ್ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹೆಚ್.ಆರ್ ಜಗದೀಶ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.
ಆದರೆ, ವರ್ಗಾವಣೆ ಆದೇಶ ತೆಗೆದುಕೊಳ್ಳದೇ ಜಗದೀಶ್ ನಾಗಮಂಗಲ ಬಸ್ ಡಿಪೋ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಜಗದೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಇಲ್ಲಿನ ಸಿಬ್ಬಂದಿ ಯತ್ನಿಸಿದರೂ ವರ್ಗಾವಣೆ ಆದೇಶ ರದ್ದುಗೊಳಿಸುವವರೆಗೂ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದರು. ಕೊನೆಗೆ ಜಗದೀಶ್ ಮನವೊಲಿಸಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.