ಮೈಸೂರು: ಮೈಸೂರಿನ ಹುಲ್ಲಹಳ್ಳಿಯ ಸಮೀಪದ ಮಹದೇವಮ್ಮ ದೇವಸ್ಥಾನ ತೆರವು ಕಾರ್ಯ ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಮೈಸೂರು ಜಿಲ್ಲಾಡಳಿತ ಏಕಾಏಕಿ ಕೈಗೊಂಡ ನಿರ್ಧಾರ ಸದನದಲ್ಲೂ, ರಾಜ್ಯದಲ್ಲೂ ಕೂಗೆಬ್ಬಿಸಿದೆ.
ಹಿಂದೂ ದೇವಾಲಯಗಳ ಉಳಿವಿಗಾಗಿ ಹಿಂದೂ ಜಾಗರಣ ವೇದಿಕೆ, ಹಿಂದೂಪರ ಸಂಘಟನೆಗಳು ಸೆ. 16 ರಂದು ಪ್ರತಿಭಟನೆಗೆ ಕರೆ ನೀಡಿದ್ದವು. ಈ ಎಲ್ಲಾ ಕಾರಣಗಳಿಂದ ರಾಜ್ಯ ಸರ್ಕಾರ ಮುಜುಗರ ತಪ್ಪಿಸಿಕೊಳ್ಳಲು ದೇವಸ್ಥಾನಗಳ ತೆರವಿಗೆ ಬ್ರೇಕ್ ಹಾಕಿದೆ.
ಈ ಸಂಬಂಧ ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ್ಯದ ಮುಖ್ಯಸ್ಥ ಜಗದೀಶ್ ಕಾರಂತ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಸಜ್ಜಾಗಿತ್ತು. ಮೈಸೂರಿನ ದೇವಾಲಯ ತೆರವು ಕಾರ್ಯ ಸದನದಲ್ಲೂ ಮಾರ್ಧನಿಸಿತ್ತು. ಇದೀಗ ತಡವಾಗಿಯಾದ್ರೂ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ದೇವಸ್ಥಾನ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಹಾಕಿ ಮೌಖಿಕ ಆದೇಶ ಮಾಡಿದೆ.
ಜಿಲ್ಲಾಧಿಕಾರಿ, ತಹಶೀಲ್ದಾರ್‌ಗೆ ನೋಟಿಸ್
ಇದರ ನಡುವೆ ಹುಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನ ತೆರವು ಮಾಡಿದ್ದ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಹಾಗೂ ನಂಜನಗೂಡು ತಹಶೀಲ್ದಾರ್ ಮೊಹನ್ ಕುಮಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿ ಡಾ. ಬಗಾದಿ ಗೌತಮ್, ಸರ್ಕಾರದಿಂದ ದೇವಸ್ಥಾನ ತೆರವು ಕಾರ್ಯಾಚರಣೆ ಸಂಬಂಧ ನೋಟಿಸ್ ನೀಡಿದ್ದು, ಸರ್ಕಾರಕ್ಕೆ ವಿವರಣೆ ನೀಡಲಾಗುತ್ತದೆ. ನೋಟಿಸ್‌ನಲ್ಲಿ ಏನ್ ಇದೆ ಅನ್ನೋದನ್ನು ಹೇಳಲ್ಲ ಎಂದಿದ್ದಾರೆ.
121 ಧಾರ್ಮಿಕ ಕೇಂದ್ರಗಳು ಟಾರ್ಗೆಟ್:
ಸದ್ಯ ಮೈಸೂರು ಜಿಲ್ಲೆಯಲ್ಲಿ ತೆರವಿಗೆ ಗುರಿಯಾಗಿರೋದು 121 ಧಾರ್ಮಿಕ ಕೇಂದ್ರಗಳು. ಇದರಲ್ಲಿ 9 ಪ್ರಕರಣಗಳು ಕೋರ್ಟ್‌ನಲ್ಲಿ ಇವೆ. 3 ದೇವಸ್ಥಾನಗಳ ಹೆಸರು ಪುನರಾವರ್ತನೆ ಆಗಿದ್ದು, ಕೈ ಬಿಡಲಾಗಿದೆ ಜೂನ್, ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಒಟ್ಟು 12 ಧಾರ್ಮಿಕ ಕೇಂದ್ರಗಳನ್ನ ಈಗಾಗಲೇ ತೆರವು ಮಾಡಲಾಗಿದೆ.ಉಳಿಕೆ 97 ಸ್ಥಳಗಳ ತೆರವು, ಸ್ಥಳಾಂತರ ಪ್ರಕ್ರಿಯೆಗೆ ಜಿಲ್ಲಾಡಳಿತ ಮುಂದಾಗಿದೆ.ಇದರಲ್ಲಿ 93 ಹಿಂದೂ ಧಾರ್ಮಿಕ ಸ್ಥಳಗಳಿವೆ. ಇವುಗಳಲ್ಲಿ 5 ಮುಸ್ಲಿಂ ಗೋರಿ/ ಮಸೀದಿ,1 ಚರ್ಚ್ ಗಳಿವೆ.
ಪ್ರತಾಪ್ ಸಿಂಹ ವಿರುದ್ಧ ದೂರು:
ಈ ನಡುವೆ ರಾಜ್ಯಾದ್ಯಂತ ದೇವಸ್ಥಾನ ತೆರವು ಕಾರ್ಯಚರಣೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ದೇವಾಲಯ ತೆರವು ಕಾರ್ಯಚರಣೆ ಕೈ ಬಿಡಲಾಗಿದೆ. ಈ ನಡುವೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ಗೆ ಕಾಂಗ್ರೆಸ್ ದೂರು ನೀಡಿದೆ.
ಮುಸ್ಲಿಂರ ದರ್ಗಾ ಹೊಡೆಯಲು ನಿಮಗೆ ತೊಡೆ ನಡುಗುತ್ತಾ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆ ಹಿನ್ನೆಲೆ ದೂರು ನೀಡಲಾಗಿದ್ದು, ಪ್ರತಾಪ್ ಸಿಂಹ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಕೆಡಿಪಿ ಸಭೆಯಲ್ಲೇ ಸಂಸದರು ಡಿಸಿಗೆ ಈ ರೀತಿ ಬೆದರಿಕೆ ಹಾಕಿರುವುದು ಅಕ್ಷಮ್ಯ ಅಪರಾಧ ಅಂತ ದೂರಿನಲ್ಲಿ ಸಿಂಹ ವಿರುದ್ಧ ಗಂಭೀರ ಅರೋಪ ಮಾಡಲಾಗಿದೆ.