ಮೈಸೂರು : ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಹಾಗೂ ಮುಡಾದಿಂದ ಮಂಜೂರಾಗಿರುವ ಸಿಎ ನಿವೇಶನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ರೀಫಾ-ಉಲ್-ಮುಸ್ಲಿಮಿನ್ ಎಜುಕೇಷನ್ ಟ್ರಸ್ಟ್ ಅಕ್ರಮ ಎಸಗಿದೆ ಎಂದು ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟ್ರಸ್ಟ್ ಹೆಸರಿನಲ್ಲಿ ಯಾವುದೇ ಸ್ವಂತ ಆಸ್ತಿ ಇಲ್ಲದಿದ್ದರೂ ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಹಾಗೂ ಮುಡಾದಿಂದ ಮಂಜೂರಾಗಿರುವ ಸಿಎ ನಿವೇಶನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ನಲ್ಲಿ ಸಾಲ ಪಡೆದು ಅಕ್ರಮವೆಸಗಿದೆ ಎಂದು ಆರೋಪಿಸಿದರು.
ಮುಸ್ಲಿಂ ಜನಾಂಗದ ಮುಖಂಡರು ಸಮುದಾಯದ ಬಡಮಕ್ಕಳಿಗೆ, ಶಿಕ್ಷಣ ಕೊಡಿಸುವ ಉದ್ದೇಶದಿಂದ 1967ರಲ್ಲಿ ರೀಫಾ-ಉಲ್-ಮುಸ್ಲಿಮಿನ್ ಎಜುಕೇಷನ್ ಟ್ರಸ್ಟ್ ಆರಂಭಿಸಿದರು. ಈ ಸಂಸ್ಥೆ ಮಜೀಸ್-ರೀಫಾ-ಉಲ್-ಮುಸ್ಲಿಮಿನ್(ವಕ್ಫ್ ಸಂಸ್ಥೆ) ಸಂಸ್ಥೆಗೆ ಸೇರಿದ ಮೈಸೂರಿನ ತಿಲಕ್ ನಗರದಲ್ಲಿರುವ ಈದ್ಗಾ ಮೈದಾನದ ಸಣ್ಣ ಕಟ್ಟಡದಲ್ಲಿ ಶಿಕ್ಷಣ ಸಂಸ್ಥೆಯನ್ನು ಕರ್ನಾಟಕ ರಾಜ್ಯ ವಕ್ಫ್ ಸಂಸ್ಥೆಯ ಅನುಮತಿಯೊಂದಿಗೆ 1981ರಲ್ಲಿ ಆರಂಭಿಸಲಾಯಿತು.
ರೀಫಾ-ಉಲ್-ಮುಸ್ಲಿಮಿನ್ ಎಜುಕೇಷನ್ ಸೊಸೈಟಿಯನ್ನು ರೀಫಾ-ಉಲ್-ಮುಸ್ಲಿಮಿನ್‌ಎಜುಕೇಷನ್ ಟ್ರಸ್ಟ್ ಎಂದು ಬದಲಾಯಿಸಿ ನೋಂದಲಾಯಿಸಲಾಯಿತು ಎಂದರು. ರೀಫಾ-ಉಲ್-ಮುಸ್ಲಿಮಿನ್ ಎಜುಕೇಷನ್ ಟ್ರಸ್ಟ್ ಹೆಸರಿಗೆ ಮುಡಾದಿಂದ ಮಹದೇವಪುರ ಬಡಾವಣೆಯಲ್ಲಿ 82.750 ಚ.ಮೀ. ಸಿಎ ನಿವೇಶನ ಶೈಕ್ಷಣಿಕ ಬಳಕೆಗಾಗಿ ಮಂಜೂರು ಮಾಡಲಾಯಿತು. ಆದರೆ, ಟ್ರಸ್ಟ್ ಆಡಳಿತ ಮಂಡಳಿಯು ನಕಲಿ ದಾಖಲೆ ಸೃಷ್ಟಿಸಿ ಪಕ್ಕದಲ್ಲಿರುವ ವಕ್ಫ್ ಮಂಡಳಿಯ ನಿವೇಶನವನ್ನ ಕಬಳಿಸಿ ಬ್ಯಾಂಕ್ನಿಂದ ಸಾಲ ಪಡೆದಿದೆ ಎಂದು ಅವರು ಆರೋಪಿಸಿದರು.
ಓದಿ:ವಿಶ್ವನಾಥ್‌ರನ್ನ ನೋಡಿದ್ರೆ ಅಯ್ಯೋ ಪಾಪ ಅನಿಸುತ್ತೆ: ಸಾರಾ ಮಹೇಶ್ ವ್ಯಂಗ್ಯ
ನಿವೇಶನ ಕಬಳಿಸಿದ ಟ್ರಸ್ಟ್ ಆಡಳಿತ ಮಂಡಳಿ, ಕಬಳಿಕೆಗೆ ಸಹಕಾರ ನೀಡಿದ ಅಧಿಕಾರಿಗಳಿಗೆ, ಟ್ರಸ್ಟ್‌ಗೆ ಸಾಲ ನೀಡಬಾರದು ಎಂಬ ನಿಯಮವಿದ್ದರೂ ಸಾಲ ನೀಡಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಸಿಬಿ ಅಥವಾ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ, ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರಿಗೆ ಪತ್ರ ಬರೆಯಲಾಗಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.