ಮೈಸೂರು: ಕೊರೊನಾ ಭೀತಿಯಿಂದಾಗಿ ಮೈಸೂರಿನ ರಸ್ತೆ ಮೇಲೆ ಸಂಚರಿಸುತ್ತಿದ್ದ ಟಾಂಗಾಗಳಿಗೆ ಕಂಕಟ ಎದುರಾಗಿದೆ. ಒಂದೊಂತ್ತಿನ ಊಟವೂ ಸಿಗದೇ ತಮ್ಮ ಕುದುರೆಗಳನ್ನೇ ಮಾರಿ ಬದುಕಬೇಕಾದ ಪರಿಸ್ಥಿತಿ ಬಂದೊದಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನ ಹಳೆಯ ಪ್ರಮುಖ ಉದ್ಯೋಗವಾಗಿದ್ದ ಟಾಂಗಾ ಸವಾರಿಗೆ ಪ್ರವಾಸಿಗರು ಬಂದರಷ್ಟೆ ಟಾಂಗಾವಾಲಾಗಳು ಬದುಕು, ಇಲ್ಲವಾದರೆ ಅಂದಿನ ದಿನ ಉಪವಾಸ ಮಲಗುವು ಸ್ಥಿತಿ ಎದುರಾಗುತ್ತದೆ. ಅಲ್ಲದೇ ಕೊರೊನಾ ಸೋಂಕಿನ ಹಿನ್ನೆಲೆ ದೇಶ್ಯಾದ್ಯಂತ ಲಾಕ್‌ಡೌನ್ ಆಗಿದೆ. ಇದರಿಂದ ಸಣ್ಣ ಸಣ್ಣ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ.
ಮೈಸೂರಿನಲ್ಲಿ ನಾಲ್ಕು ಕಡೆ ಟಾಂಗಾ ಸ್ಯಾಂಡ್‌ಗಳನ್ನು ನಿರ್ಮಾಣ ಮಾಡಿ, ಅಲ್ಲಿ ಕುದುರೆ ಕಟ್ಟಲು ವ್ಯವಸ್ಥೆ ಮಾಡಲಾಗಿತ್ತು. 150ಕ್ಕೂ ಹೆಚ್ಚು ಟಾಂಗಾಕ್ಕಾಗಿ ಕುದುರೆಗಳಿದ್ದು, ಈ ಕುದುರೆಗಳನ್ನು ನಂಬಿ 250ಕ್ಕೂ ಕುಟುಂಬಗಳು ದಿನದೂಡುತ್ತಿದ್ದವು. ಆದರೀಗ ಮೈಸೂರಿನಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದ್ದರಿಂದ ಟಾಂಗಾವಾಲಾ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ.
ನಿತ್ಯ 200ರಿಂದ 300ರೂ, ಸಂಪಾದನೆ ಮಾಡಿ, ಅಷ್ಟರಲ್ಲಿಯೇ ಜೀವನ ನಡೆಸುತ್ತಿದ್ದ ಟಾಂಗಾವಾಲಾಗಳಿಗೆ ಈಗ ಬದುಕು ನಡೆಸುವುದೇ ಕಷ್ಟವಾಗಿದೆ.
ಈ ಬಗ್ಗೆ ಈಟಿವಿ ಭಾರತ್ನೊಂದಿಗೆ ಮಾತನಾಡಿದ ಹಿರಿಯ ಟಾಂಗಾವಾಲಾ ಜಬೀವುಲ್ಲಾ, ಕೊರೊನಾದಿಂದಾಗಿ ಎಲ್ಲೆಡೆ ಲಾಕ್‌ಡೌನ್ ಆಗಿರುವುದಿರಂದ ಕುದುರೆಗಳನ್ನು ಸಾಕುವುದೇ ನಮಗೆ ಕಷ್ಟವಾಗುತ್ತದೆ. ಇಂತಹ ಸಮಯದಲ್ಲಿ ನಮಗೆ ಸರಿಯಾದ ಆಹಾರ ಸಿಗುತ್ತಿಲ್ಲ ಅವುಗಳನ್ನು ಹೇಗೆ ಸಾಕುವುದು ಎಂಬ ಚಿಂತೆ ಕಾಡುತ್ತಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಟಾಂಗಾವಾಲಾ ಸಾದಿಕ್ ಪಾಷಾ ಮಾತನಾಡಿ, ದಾನಿಗಳು ಕೂಡ ದಾನ ಮಾಡುತ್ತಿದ್ದಾರೆ. ಅವರು ಎಷ್ಟು ಬಾರಿ ದಾನ ಮಾಡಲು ಸಾಧ್ಯ? ಎರಡ್ಮೂರು ದಿನಕ್ಕೆ ಆಹಾರ ಒದಗಿಸುತ್ತಾರೆ. ಕುದುರೆ ಸಾಕುವುದು ನಮಗೆ ಸವಾಲಿನ ಕೆಲಸವಾಗಿದೆ ಎಂದಿದ್ದಾರೆ.