ಮೈಸೂರು : "ಸ್ವಾತಂತ್ರ್ಯಾನಂತರ ಎಲ್ಲ ಕ್ಷೇತ್ರಗಳಲ್ಲೂ ದೇಶ ಸಂಕಷ್ಟದ ಸ್ಥಿತಿಯಲ್ಲಿತ್ತು. ಅಂತಹ ಸಂದರ್ಭದಲ್ಲಿ ಮೈಸೂರಿನ ರಾಜೇಂದ್ರ ಶ್ರೀಗಳು ಸ್ಥಾಪಿಸಿದ ಜೆಎಸ್‌ಎಸ್ ಮಹಾವಿದ್ಯಾಪೀಠದ ಅಗತ್ಯತೆ ಬಹುದೊಡ್ಡ ವರದಾನವಾಗಿ ಪರಿಣಮಿಸಿತು" ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಕೊಂಡಾಡಿದರು. ಜೆಎಸ್‌ಎಸ್ ಆಸ್ಪತ್ರೆಯ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಜಿ20 ನಾಯಕತ್ವ: ಭಾರತದ ಅವಕಾಶಗಳು ಕುರಿತು ಅವರು ದತ್ತಿ ಉಪನ್ಯಾಸ ನೀಡಿದರು.
"ಅಂದು ಭಾರತ ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿತ್ತು. ರಾಜೇಂದ್ರ ಶ್ರೀಗಳ ದೂರದೃಷ್ಟಿಯಿಂದ ಸ್ಥಾಪನೆಯಾದ ವಿದ್ಯಾಪೀಠ ಇಂದು ವಿಶ್ವದಾದ್ಯಂತ 350ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿದ್ದು ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದೆ. ಇಂದು ಭಾರತವನ್ನು ಜಗತ್ತೇ ತಿರುಗಿ ನೋಡುತ್ತಿದೆ. ಭಾರತದ ಮಾತುಗಳನ್ನು ಜಗತ್ತು ಒಪ್ಪಿಕೊಳ್ಳುತ್ತಿದೆ. ಅದಕ್ಕೆ ಕಾರಣ ದೇಶ ಸಮರ್ಥ ನಾಯಕತ್ವ" ಎಂದರು.
ಭಾರತ ಹಿಂಸೆ ಒಪ್ಪದು: ಭಾರತ ಕೇವಲ ಯಾವುದೋ ಒಂದು ರಾಜನಿಂದ ಸೃಷ್ಟಿಯಾದುದಲ್ಲ. ನಮ್ಮ ಪ್ರಾಚೀನ ಋಷಿಮುನಿಗಳು, ಸಂತರಿಂದ ನಿರ್ಮಿಸಲ್ಪಟ್ಟಿದೆ. ಮಾನವೀಯತೆಯಲ್ಲಿ ನಂಬಿಕೆಯಿಟ್ಟಿರುವ ರಾಷ್ಟ್ರ ಭಾರತ. ಹೀಗಾಗಿಯೇ ರಷ್ಯಾ ಮತ್ತು ಉಕ್ರೇನ್ ರಾಷ್ಟ್ರಗಳಿಗೆ ಯುದ್ಧ ಬೇಡ ಎಂಬ ಸಂದೇಶವನ್ನು ನೀಡಿತು. ಅತಿಯಾದ ಹೈಡ್ರೋಕಾರ್ಬನ್ ಉತ್ಪಾದನೆಯಿಂದ ಇಂದು ಭೂಮಿಯ ತಾಪ ಹೆಚ್ಚುತ್ತಿದೆ. ನದಿಗಳು ಒಣಗುತ್ತಿವೆ. ಕಾಡು ಮಾಯವಾಗುತ್ತಿದೆ. ಅತಿಯಾದ ರಸಗೊಬ್ಬರ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಈ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ಯೋಚಿಸಬೇಕು ಎಂದು ರಾಜ್ಯಪಾಲರು ತಿಳಿಸಿದರು.
ಭಾರತ ಜಿ20 ಅಧ್ಯಕ್ಷತೆ ವಹಿಸಿರುವುದು ದೇಶಕ್ಕೆ ಎಷ್ಟು ಮುಖ್ಯವೋ, ಜಗತ್ತಿಗೂ ಅಷ್ಟೇ ಮುಖ್ಯ. ಜಗತ್ತೇ ಒಂದು ಕುಟುಂಬ ಎನ್ನುವ ವಸುಧೈವ ಕುಟುಂಬಕಂ ಪರಿಕಲ್ಪನೆಯೊಂದಿಗೆ ದೇಶ ಕೆಲಸ ಮಾಡುತ್ತಿದೆ. ಇದು ಭಾರತೀಯರಿಗೆ ವಂಶವಾಹಿಯಲ್ಲೇ ಬಂದಿದೆ. ಸ್ವಾಮಿ ವಿವೇಕಾನಂದರ ಪರಿಕಲ್ಪನೆಯ ಭಾರತವನ್ನು ಕಟ್ಟಬೇಕಿದೆ. ಆತ್ಮವಿಶ್ವಾಸ, ಸ್ವನಂಬಿಕೆಯೊಂದಿಗೆ ಇಂದಿನ ಯುವಕರಿಂದ ಇದು ಸಾಧ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ :ಮೈಸೂರಿನಲ್ಲಿ 'ನನ್ನ ಮತ ಮಾರಾಟಕ್ಕಿಲ್ಲ' ಅಭಿಯಾನಕ್ಕೆ ಚಾಲನೆ