ಮೈಸೂರು: ಬಿಡುವಿಲ್ಲದ ಕೊರೊನಾ ಕರ್ತವ್ಯದ ನಡುವೆ, ವಂಚನೆಗೊಳಗಾದ ವೃದ್ಧೆಯರನ್ನು ತವರು ಗ್ರಾಮಕ್ಕೆ ಸೇರಿಸಿ ನಂಜನಗೂಡು ತಹಶೀಲ್ದಾರ್ ಮಾನವೀಯತೆ ಮರೆದರು.
ವೃದ್ಧಾಶ್ರಮಕ್ಕೆ ಸೇರಿಸುವ ಆಸೆ ತೋರಿಸಿ ವೃದ್ಧೆಯರನ್ನು ಹೆದ್ದಾರಿಯಲ್ಲಿ ಬಿಟ್ಟು ನೀಚರು ಪರಾರಿಯಾಗಿದ್ದರು. ಅನ್ನ, ಆಹಾರವಿಲ್ಲದೆ ನಡುರಸ್ತೆಯಲ್ಲಿ ನರಳಾಡುತ್ತಿದ್ದ ಈ ವೃದ್ಧೆಯರಿಗೆ ತಹಶೀಲ್ದಾರ್ ಆರೈಕೆ ಮಾಡಿದರು.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ನಿವಾಸಿಗಳಾಗಿರುವ 85 ವರ್ಷದ ಇಬ್ಬರು ವೃದ್ಧೆಯರನ್ನು ಮೈಸೂರು ಮೂಲದ ವ್ಯಕ್ತಿಗಳು ವೃದ್ಧಾಶ್ರಮದ ಆಸೆ ಆಮಿಷ ತೋರಿಸಿ, ನಂಜನಗೂಡು ತಾಲೂಕಿನ ಕೋಡಿನರಸೀಪುರ ಗೇಟ್ ಬಳಿಯ ಕಾಳಮ್ಮನ ಗುಡಿಯ ಮುಂಭಾಗದ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದಾರೆ. ಅಲ್ಲಿಯೇ ನರಳಾಡುತ್ತಿದ್ದ ವೃದ್ಧೆಯರನ್ನು ನೋಡಿದ ಸ್ಥಳೀಯರು, ನಂಜನಗೂಡು ಪಟ್ಟಣದ ಯುವ ಬ್ರಿಗೇಡ್ ಸ್ವಯಂಸೇವಾ ಸಂಸ್ಥೆಯ ಮುಖಂಡರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಯುವ ಬ್ರಿಗೇಡ್ ಮುಖಂಡರು, ವಯೋವೃದ್ಧೆಯರನ್ನು ನಂಜನಗೂಡಿನ ತಹಶೀಲ್ದಾರ್ ಕಚೇರಿಗೆ ಹಸ್ತಾಂತರ ಮಾಡಿದ್ರು. ಬಳಿಕ ಲಿಂಗಣ್ಣ ಛತ್ರದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿ ಉಪಚರಿಸಿ ರಕ್ಷಣೆ ನೀಡಲಾಗಿತ್ತು. ನಿರಾಶ್ರಿತರ ಕೇಂದ್ರದಲ್ಲಿ 5 ದಿನಗಳ ಕಾಲ ಆಶ್ರಯ ಪಡೆದು, ತಮ್ಮ ಊರಿಗೆ ಹೋಗಬೇಕು ಎಂದು ವೃದ್ಧೆಯರು ಕೇಳಿಕೊಂಡಾಗ, ನಂಜನಗೂಡು ಪಟ್ಟಣದ ನಗರಸಭಾ ಇಲಾಖಾ ಅಧಿಕಾರಿಗಳ ಸಹಕಾರದಿಂದ ತಹಶೀಲ್ದಾರ್ ಮೋಹನ್ ಕುಮಾರಿ, ವೃದ್ಧೆಯರನ್ನು ತಮ್ಮ ಸ್ವಗ್ರಾಮಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು.