ಮೈಸೂರು: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಧ್ಯಂತರ ಚುನಾವಣೆ ತಂತ್ರದ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ಶಾಸಕ ಸುರೇಶ್ ಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಪಕ್ಷಗಳಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಆದರೆ ಸರ್ಕಾರವನ್ನು ಉಳಿಸಿಕೊಳ್ಳುವ ದೃಷ್ಠಿಯಿಂದ ದೇವೇಗೌಡರು ಮಧ್ಯಂತರ ಚುನಾವಣೆ ಅಸ್ತ್ರ ಬಿಟ್ಟಿದ್ದಾರೆ. ಚುನಾವಣೆ ಎದುರಾದಾಗ ಏನೆಲ್ಲ ಸಮಸ್ಯೆ ಎದುರಾಗಲಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮಧ್ಯಂತರ ಚುನಾವಣೆ ಬೇಡವೆಂದು ಪತ್ರ ಬರೆದು, ಅವರಿಗೆ ಆಡಳಿತ ನಡೆಸಲು ಸಾಧ್ಯವಾಗದೇ ಇದ್ದರೆ ನಮಗೆ ಕೊಡಿ ಆಡಳಿತ ನಡೆಸುತ್ತೀವಿ ಎಂದಿದ್ದಾರೆ. ಏನಾದರು ಮಧ್ಯಂತರ ಚುನಾವಣೆ ಎದುರಾದರೆ ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಸ್ವಾಗತ ಬಯಸುತ್ತೀನಿ. ಆದರೆ ಮೊದಲು ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ತೆರಳಿ ಏನು ಅಭಿವೃದ್ಧಿಯಾಗಿದೆ ಎಂದು ವಾಸ್ತವತೆ ತಿಳಿಯಲಿ. ಜನರನ್ನು ಬೇರೆ ಕಡೆ ಸೆಳೆಯಲು ಗ್ರಾಮ ವಾಸ್ತವ್ಯ ನಾಟಕವಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ರೈತರ ಸಾಲಮನ್ನಾ ಮಾಡಿದ್ದೀನಿ ಅಂತಾರೆ. ಆದರೆ ವಾಸ್ತವತೆ ಬೇರೆ ಇದೆ. ಸಾಲಮನ್ನಾ ಅವರಿಗೆ ಶ್ಲೋಗನ್ ಆಗಿದೆ ಎಂದು ಹರಿಹಾಯ್ದರು.