ಮೈಸೂರು: ನಗರದ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಯಶಸ್ವಿಯಾಗಿ ಮಾಡಲಾಗಿದ್ದು, ಲಸಿಕೆ ಪ್ರಯೋಗ ಮಕ್ಕಳ ಮೇಲೆ ಹೇಗೆ ನಡೆಯಿತು ಎಂಬ ಬಗ್ಗೆ ಡಾಕ್ಟರ್ ಪ್ರದೀಪ್ ಮಾಹಿತಿ ನೀಡಿದ್ದಾರೆ.
ದೇಶದ 10 ಆಸ್ಪತ್ರೆಗಳಲ್ಲಿ ಸ್ವದೇಶಿ ಉತ್ಪಾದನೆಯಾದ ಭಾರತ್ ಬಯೋಟೆಕ್ ಲಿಮಿಟೆಡ್ ಫಾರ್ಮಾದ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ದೇಶದ 10 ಕಡೆ ನಡೆಯುತ್ತಿದೆ. ಕರ್ನಾಟಕದಲ್ಲಿರುವ ಮೈಸೂರಿನ ಸರ್ಕಾರಿ ಚೆಲುವಾಂಬ ಮಕ್ಕಳ ಆಸ್ಪತ್ರೆಯಲ್ಲಿ 12 ರಿಂದ 18 ವರ್ಷ ಒಳಗಿನ 30 ಮಕ್ಕಳಿಗೆ ಲಸಿಕೆಯನ್ನು ಕಳೆದ ಭಾನುವಾರದಿಂದ ನೀಡಲಾಗುತ್ತಿದೆ. ಲಸಿಕೆಗೆ ಮುನ್ನ ಈ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಈ ವಯಸ್ಸಿನ ಮಕ್ಕಳನ್ನು ರಿಜಿಸ್ಟರ್ ಮಾಡಲಾಗಿದ್ದು, ಒಟ್ಟು 30 ಜನರಿಗೆ ಲಸಿಕೆಯನ್ನು ನೀಡಲಾಗಿದೆ. ಲಸಿಕೆಗೆ ಮುನ್ನ RTPCR ಟೆಸ್ಟ್ ಮಾಡಲಾಗಿದ್ದು, ಅದರ ವರದಿ ನೆಗಟಿವ್ ಬಂದ ನಂತರ ಲಸಿಕೆ ನೀಡಲಾಗಿದೆ.
ಲಸಿಕೆ ಪಡೆದ ಮಕ್ಕಳಲ್ಲಿ 2 ಗಂಟೆ ಆಸ್ಪತ್ರೆಯಲ್ಲೇ ನಿಗಾವಹಿಸಿ ನಂತರ ಅವರನ್ನು ಮನೆಗೆ ಕಳುಹಿಸಿ ಕೊಡಲಾಗುವುದು. ನಿತ್ಯ ಅಷ್ಟು ಜನರಿಗೆ ದೂರವಾಣಿ ಮೂಲಕ ಕರೆ ಮಾಡಿ ಮಾಹಿತಿ ಪಡೆಯಲಾಗುವುದು. ಲಸಿಕೆ ಪಡೆದ 30 ಜನರಲ್ಲಿ 6/7 ಜನ ಮಕ್ಕಳಿಗೆ ನೋವು ಒಂದೆರಡು ಮಕ್ಕಳಿಗೆ ಜ್ವರ ಕಾಣಿಸಿಕೊಂಡಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಡಾ. ಪ್ರದೀಪ್ ವಿವರಿಸಿದ್ದಾರೆ. ಮುಂದಿನ ಹಂತದಲ್ಲಿ 6 ರಿಂದ 12 ವರ್ಷದ ಮಕ್ಕಳಿಗೆ ವ್ಯಾಕ್ಸಿನ್, ಆ ನಂತರ 2 ರಿಂದ 6 ವರ್ಷ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗ ಮಾಡಲಾಗುವುದು. ಮಕ್ಕಳ ಮೇಲೆ 6 ರಿಂದ 7 ತಿಂಗಳು ಕಾಲ ಲಸಿಕೆಯ ಪ್ರಯೋಗ ನಡೆಯಲಿದೆ ಎಂದು ಚೆಲುವಾಂಬ ಆಸ್ಪತ್ರೆಯ ಡಾಕ್ಟರ್ ಪ್ರದೀಪ್ ವಿವರಿಸಿದರು.