ಮೈಸೂರು: ಮಧುಮೇಹದೊಂದಿಗೆ ಮೂತ್ರಪಿಂಡ ಕಾಯಿಲೆಗೆ ಒಳಗಾಗಿದ್ದ 35 ವರ್ಷದ ಗರ್ಭಿಣಿಗೆ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಏಕಕಾಲಿಕ ಮೇದೋಜ್ಜಿರಕ ಗ್ರಂಥಿ, ಕಿಡ್ನಿ ಕಸಿ(ಎಸ್‌ಪಿಕೆಟಿ)ಗೆ ಮಹಿಳೆ ಒಳಗಾಗಿದ್ದರು.
ಬಾಲ್ಯದಲ್ಲಿಯೇ ಮಧುಮೇಹ ಮತ್ತು ಡಯಾಲಿಸಿಸಸ್‌ನೊಂದಿಗೆ ದೀರ್ಘ ಕಾಲದ ಮೂತ್ರ ಪಿಂಡ (ಸಿಕೆಡಿ) ಕಾಯಿಲೆಯಿಂದ ಮಹಿಳೆ ಬಳಲುತ್ತಿದ್ದರು. ಕುವೆಂಪು ನಗರದ ಅಪೋಲೋ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ ಈ ಗರ್ಭಿಣಿಗೆ ಹೆರಿಗೆಯಾಗಿದ್ದು, ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ತಾಯಿ-ಮಗು ಆರೋಗ್ಯವಾಗಿದ್ದಾರೆ.
ಈ ಯಶಸ್ವಿ ಹೆರಿಗೆ ದೇಶದಲ್ಲಿಯೇ ಮೊದಲನೇಯದಾಗಿದೆ. ಎಸ್‌ಪಿಕೆಟಿ ನಂತರದ ರೋಗಿಯು ಸ್ವಾಭಾವಿಕವಾಗಿ ಗರ್ಭಧರಿಸಲು ಮತ್ತು ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಸಾಧ್ಯವಾದ ಮೊದಲ ಪ್ರಕರಣ ಇದಾಗಿದೆ.
ಕಸಿ ಶಸ್ತ್ರ ಚಿಕಿತ್ಸಕ ಕನ್ಸಲ್ಟೆಂಟ್ ಡಾ.ಸುರೇಶ್ ರಾಘವಯ್ಯ, ಸ್ತ್ರೀ ರೋಗ ತಜ್ಞರಾದ ಡಾ.ಬಿ.ಪಿ ಅಂಜಲಿ, ಅರಿವಳಿಕೆ ತಜ್ಞರಾದ ಡಾ.ಅಂದಿತಾ ಮುಖರ್ಜಿ ಈ ಚಿಕಿತ್ಸಾ ತಂಡದಲ್ಲಿದ್ದರು ಎಂದು ಆಪೊಲೊ ಬಿಜಿಎಸ್ ಆಸ್ಪತ್ರೆಯ ಆಡಳಿತ ವಿಭಾಗದ ಉಪಾಧ್ಯಕ್ಷ ಎನ್.ಜಿ.ಭರತೀಶ್ ರೆಡ್ಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.