ಮೈಸೂರು : ಈಗ ದೇಶದಲ್ಲಿ ಎಲ್ಲಿ ನೋಡಿದರೂ ನಿರುದ್ಯೋಗ ಸಮಸ್ಯೆಯದ್ದೇ ಮಾತು. ಅದರಲ್ಲೂ ಕೊರೊನಾ ಆವರಿಸಿಕೊಂಡ ಬಳಿಕ ಈ ಸಮಸ್ಯೆ ದುಪ್ಪಟ್ಟಾಗಿದೆ. ಆದರೆ, ಯುವ ಸಮೂಹ ಮನಸ್ಸು ಮಾಡಿದರೆ ಎಂತಹಾ ಸಮಸ್ಯೆಯನ್ನೂ ತಾವೇ ಪರಿಹರಿಸಿಕೊಳ್ಳಬಹುದು ಎಂಬುವುದಕ್ಕೆ ಇಲ್ಲೊಂದು ಯುವಕರ ತಂಡ ಮಾದರಿಯಾಗಿದೆ.
ಹೌದು, ಮೈಸೂರು ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಮುರುಳಿ ಗುಂಡಣ್ಣ, ಅಲಾಪ್, ಯತಿರಾಜ್ ಹಾಗೂ ಸುಹಾಸ್ ಕೃಷ್ಣ ಎಂಬ ನಾಲ್ವರು ಯುವ ಟೆಕ್ಕಿಗಳು ಕಟ್ಟಿದ 'ಫುಡ್ ಬಾಕ್ಸ್' ಎಂಬ ಸಣ್ಣ ಹೋಟೆಲ್ನ ಯಶೋಗಾಥೆಯಿದು. ಲಕ್ಷಾಂತರ ರೂಪಾಯಿ ಸಂಬಳ ಬರುವ ಉದ್ಯೋಗ ಬಿಟ್ಟು, ಈ ನಾಲ್ವರು ಆರಂಭಿಸಿದ ಹೊಟೇಲ್, ಈಗ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುವ ಹಂತಕ್ಕೆ ಬಂದಿದೆ. ಇದರ ಹಿಂದೆ ಇವರ ದೊಡ್ಡ ಪರಿಶ್ರಮವಿದೆ.
2015 ರಲ್ಲಿ ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಸಂಬಳ ಬರುವ ಕೆಲಸಕ್ಕೆ ಸೇರಿಕೊಂಡ ಈ ನಾಲ್ವರು ಸ್ನೇಹಿತರು, ಏನಾದರೂ ವಿಶಿಷ್ಟವಾಗಿ ಮಾಡಬೇಕೆಂದು ಯೋಚನೆ ಮಾಡಿದ್ದರು. ಈ ವೇಳೆ ಅವರಿಗೆ ಹೊಳೆದ ಐಡಿಯಾವೇ ಕಡಿಮೆ ಬೆಲೆಗೆ ಒಳ್ಳೆಯ ಊಟ ಕೊಡುವುದು. ತಮ್ಮ ಕನಸನ್ನು ಕಾರ್ಯರೂಪಕ್ಕೆ ತರಲು 2019 ರಲ್ಲಿ ರಲ್ಲಿ 'ಫುಡ್ ಬಾಕ್ಸ್' ಎಂಬ ಆನ್ಲೈನ್ ಆಹಾರ ಪೂರೈಕೆ ಮಾಡುವ ಯೋಜನೆಯನ್ನು ಇವರು ಶುರು ಮಾಡಿದರು.
ಆರಂಭದಲ್ಲಿ ಮುರುಳಿ ಗುಂಡಣ್ಣ ತನ್ನ ಅಜ್ಜಿಯ ಸಹಾಯದಿಂದ 'ಅಮ್ಮನ ಕೈ ತುತ್ತು' ಎಂಬ ಆನ್ಲೈನ್ ಆಹಾರ ಪೂರೈಕೆ ವ್ಯವಸ್ಥೆಯನ್ನು ಆರಂಭಿಸಿದ್ದ. ಮೊದಲು ಮೊದಲು ವಾರಕ್ಕೆ 10 ರಿಂದ 15 ಊಟ ಮಾತ್ರ ಇವರ ಕ್ಯಾಂಟೀನ್ನಿಂದ ಆರ್ಡರ್ ಆಗುತ್ತಿತ್ತು. ಬಳಿಕ, ಇದು ಜನರಿಗೆ ಪ್ರಚಾರವಾಗಿ ವಾರಕ್ಕೆ 3 ಸಾವಿರ ಊಟ ಆರ್ಡರ್ ಆಗುವ ಮಟ್ಟಕ್ಕೆ ಬಂದಿದೆ. ತಮ್ಮ ಯೋಜನೆ ಯಶಸ್ಸು ಕಾಣುತ್ತಿದ್ದಂತೆ, ಮುರುಳಿ ತನ್ನ ಸ್ನೇಹಿತರ ಜೊತೆಗೂಡಿ ನಗರದ ಚಾಮುಂಡಿಪುರದಲ್ಲಿ 2019 ರಲ್ಲಿ ಫುಡ್ ಬಾಕ್ಸ್ ಎಂಬ ಪುಟ್ಟ ಹೋಟೆಲ್ ಪ್ರಾರಂಭಿಸಿದರು. ಈ ಹೋಟೆಲ್ನಲ್ಲಿ ಪ್ರಸ್ತುತ ವಾರ್ಷಿಕ ಬರೋಬ್ಬರಿ 1.5 ಕೋಟಿ ರೂ. ವ್ಯವಹಾರ ಆಗುತ್ತಿದೆ.
ಫುಡ್ ಬಾಕ್ಸ್ ಹೋಟೆಲ್ ವ್ಯವಹಾರದಲ್ಲಿ ಮಾತ್ರವಲ್ಲದೆ, ಸಾರ್ವಜನಿಕ ವಲಯದಲ್ಲಿಯೂ ಒಳ್ಳೆಯ ಹೆಸರು ಗಳಿಸಿದೆ. ಇಲ್ಲಿಂದ, ಸಿನಿಮಾ ಶೂಟಿಂಗ್ ಸ್ಥಳಗಳಿಗೆ ಸಾಫ್ಟ್ ವೇರ್ ಉದ್ಯೋಗಿಗಳಿಗೆ ಆಹಾರ ಪೂರೈಕೆ ಮಾಡಲಾಗುತ್ತಿದೆ. ನಾವು ಹೋಟೆಲ್ ಆರಂಭಿಸಿದಾಗ ಇನ್ಫೋಸಿಸ್ ನಾರಾಯಣ ಮೂರ್ತಿ ನಮ್ಮ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದರು ಎಂದು ಮುರಳಿ ಗುಂಡಣ್ಣ ಸ್ಮರಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಅಮ್ಮನ ಕೈ ತುತ್ತಿನಿಂದ ಪ್ರಾರಂಭವಾದ ಸಣ್ಣ ಕ್ಯಾಂಟೀನ್ ಇಂದು ಫುಡ್ಬಾಕ್ಸ್ ಹೆಸರಿನಲ್ಲಿ ಮನೆಮಾತಾಗಿರುವುದು ನಿಜಕ್ಕೂ ಶ್ಲಾಘಣೀಯ. ಕೆಲಸವಿಲ್ಲದ ಕೊರಗಿನಲ್ಲಿ ನೊಂದು ಕೂತಿರುವ ಅದೆಷ್ಟೋ ಯುವ ವಿದ್ಯಾವಂತರಿಗೆ ಈ ನಾಲ್ವರು ಯುವ ಟೆಕ್ಕಿಗಳು ಸ್ಪೂರ್ತಿ ಎಂದರೆ ತಪ್ಪಾಗಲಾರದು.