ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಲಲಿತಾದ್ರಿಪುರಂನ ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತ ಮುಡಾ ಅಧಿಕಾರಿಗಳು, ಚಾಮುಂಡಿ ಬೆಟ್ಟದ ಆಸುಪಾಸಿನ ರಸ್ತೆಗಳಲ್ಲಿ ಬೀದಿ ದೀಪ ಅಳವಡಿಕೆ ಕಾರ್ಯ ಆರಂಭಿಸಿದ್ದಾರೆ.
ಚಾಮುಂಡಿ ಬೆಟ್ಟದ ಪೂರ್ವ ದಿಕ್ಕಿಗಿರುವ ಗುಡ್ಡದ ಪ್ರದೇಶ ಮುಡಾ ವ್ಯಾಪ್ತಿಗೊಳಪಟ್ಟಿರುವ ಹಿನ್ನೆಲೆಯಲ್ಲಿ, ಬೆಟ್ಟದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸುಮಾರು 29 ಕಂಬಗಳನ್ನು ನಿಲ್ಲಿಸಿ, ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಮುಂದಿನ ಮೂರು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ವಿದ್ಯುತ್ ಸಂಪರ್ಕ ಕಲ್ಪಿಸುವ ಮೂಲಕ ಅಪರಾಧ ಕೃತ್ಯ ನಿಯಂತ್ರಿಸಲು ಮುಡಾ ಮುಂದಾಗಿದೆ. ಗಡಿ ಭಾಗ ಹಾಗೂ ಗುಡ್ಡದ ಮಧ್ಯೆ ಹಾದುಹೋಗಿರುವ ರಸ್ತೆ ಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.
ಆ. 24ರ ಸಂಜೆ ಲಲಿತಾದ್ರಿಪುರಂ ಬೆಟ್ಟದ ಬಳಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಪ್ರಕರಣ ಸಂಬಂಧ ಈಗಾಗಲೇ 6 ಜನರನ್ನು ಬಂಧಿಸಲಾಗಿದ್ದು, 7ನೇ ಆರೋಪಿಯನ್ನು ಬಂಧಿಸಲು ಮೈಸೂರು ಪೊಲೀಸರ ತಂಡ ತಮಿಳುನಾಡಿನಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.
20 ಮಂದಿ ಪೊಲೀಸರ ತಂಡವು ತಮಿಳುನಾಡಿನಲ್ಲೇ ಬೀಡುಬಿಟ್ಟಿದ್ದು, ಮೊಬೈಲ್ ಟವರ್ ಲೊಕೇಷನ್ ಜಾಡು ಹಿಡಿದು ಆರೋಪಿಗಾಗಿ ತಲಾಶ್ ನಡೆಸುತ್ತಿದೆ.
ಇದನ್ನೂ ಓದಿ: ವಿಜಯಪುರದ ಸುತ್ತಮುತ್ತ ಭಾರಿ ಶಬ್ದ: ವರದಿ ನೀಡಲು ಸೂಚಿಸಿದ್ದೇನೆ ಎಂದ ಸಚಿವೆ ಶಶಿಕಲಾ ಜೊಲ್ಲೆ