ಮೈಸೂರು : ಜುಲೈ 19ರಿಂದ ಸಂಸತ್ ಮಳೆಗಾಲದ ಅಧಿವೇಶನ 26 ದಿನಗಳ ಕಾಲ ನಡೆಯಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಖಾತೆಯ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಸುತ್ತೂರು ಮಠಕ್ಕೆ ಆಗಮಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶ್ರೀಗಳ ಆರ್ಶೀವಾದ ಪಡೆದು ಮಾಧ್ಯಮಗಳ ಜೊತೆ ಮಾತನಾಡಿದರು. ಇದೇ ತಿಂಗಳ 19 ರಿಂದ 26 ದಿನಗಳ ಕಾಲ ಸಂಸತ್‌ನ ಮಳೆಗಾಲದ ಅಧಿವೇಶನ ನಡೆಯಲಿದೆ.
ಈ ಅಧಿವೇಶನದಲ್ಲಿ ಹಲವಾರು ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ. ಹಾಗೆಯೇ, ಹಲವಾರು ಬಿಲ್ಗಳು ಮಂಡನೆಯಾಗಲಿವೆ. ಅಧಿವೇಶನಕ್ಕೂ ಮುನ್ನ ವಿರೋಧ ಪಕ್ಷಗಳ ಸಭೆ ಕರೆಯಲಾಗುವುದು ಎಂದ ಕೇಂದ್ರ ಸಚಿವರು, ಸರ್ಕಾರ ಸಂಸತ್‌ನಲ್ಲಿ ಯಾವುದೇ ಚರ್ಚೆಗೂ ಸಿದ್ಧವಿದೆ ಎಂದರು.
ಕೃಷಿ ಮಸೂದೆಗಳ ಬಗ್ಗೆ ರೈತರು ಅಥವಾ ನಾಯಕರುಗಳು ಸಲಹೆ ನೀಡಿದರೆ ಆ ರೀತಿ ಕೃಷಿ ಮಸೂದೆಗಳನ್ನು ಬದಲಾವಣೆ ಮಾಡಲಾಗುವುದು. ಆದರೆ, ಈ ಕೃಷಿ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ದೇಶದಲ್ಲಿ ಲಸಿಕೆಯ ಕೊರತೆ ಇದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ದುರಹಂಕಾರ ಮತ್ತು ಮಾಹಿತಿ ಕೊರತೆಗೆ ಲಸಿಕೆ ಇಲ್ಲ. ರಾಹುಲ್ ಗಾಂಧಿ ಅವರಿಗೆ ಮಾಹಿತಿ ಕೊರತೆಯಿದೆ.
ಅವರಿಗೆ ಇಂಗ್ಲೆಂಡ್, ಅಮೆರಿಕಾ ದೇಶದ ಜನಸಂಖ್ಯೆಯಷ್ಟು ಲಸಿಕೆಯನ್ನು ಒಂದೊಂದು ತಿಂಗಳಲ್ಲಿ ನೀಡಲಾಗುತ್ತಿದೆ. ಒಂದು ತಿಂಗಳ ನಂತರ ಮಾಹಿತಿ ಪಡೆದು ರಾಹುಲ್ ಗಾಂಧಿಯವರು ಹೇಳಿಕೆ ನೀಡಬೇಕಿತ್ತು. ಆದರೆ, ಅವರ ದುರಹಂಕಾರದ ಹೇಳಿಕೆಗೆ ಲಸಿಕೆ ಕೊಡಲು ಸಾಧ್ಯವೇ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ : UNLOCK 3.0 : ಪಬ್ ಇಲ್ಲ, ಬಾರ್‌ನಲ್ಲಿ ಕೌಂಟರ್ ಜತೆ ಕೂತ್ಕೊಂಡು ಕುಡಿಯಲು ಅನುಮತಿ.. ಸಿಎಂ ಬಿಎಸ್ವೈ
ರಾಜ್ಯದಲ್ಲಿ ಲಸಿಕೆಯ ಇಲ್ಲ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ 1 ವಾರದ ಮೊದಲೇ ಎಷ್ಟಷ್ಟು ಲಸಿಕೆ ನೀಡುತ್ತೇವೆ ಎಂಬ ಬಗ್ಗೆ ಎಲ್ಲಾ ರಾಜ್ಯಗಳಿಗೂ ಮಾಹಿತಿ ನೀಡುತ್ತೇವೆ. ಅದಕ್ಕೆ ತಕ್ಕಂತೆ ಲಸಿಕೆಯನ್ನು ವಿತರಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.