ಮೈಸೂರು:ಬಿಜೆಪಿಯ ನಡೆ ಪಂಚಾಯಿತಿಗಳ ಕಡೆಗೆ ಎಂಬ ಗುರಿಯನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಬೆಟ್ಟದಪುರದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿದ್ರು. ಬೇರು ಮಟ್ಟದಿಂದ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿ. ನಮಗಾಗಿ ದುಡಿದ ಕಾರ್ಯಕರ್ತರ ಚುನಾವಣೆಗೆ ನಾವು ಶ್ರಮ ಹಾಕುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಘೋಷಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ನಾವು ತ್ವರಿತವಾಗಿ ಸಂಘಟನೆ ಮಾಡಿ ಕಾರ್ಯಕರ್ತರು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ನಿಮ್ಮ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಹೇಗೆ ನಮ್ಮ ಚುನಾವಣೆಗಳಿಗೆ ನಾವು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆವೋ ಹಾಗೇ ನಮಗಾಗಿ ದುಡಿದ ಕಾರ್ಯಕರ್ತರ ಚುನಾವಣೆಗೂ ನಾವು ಅದೇ ರೀತಿ ದುಡಿಯಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಹೀಗಾಗಿ ನಾನು ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವನಾಗಿ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಅದಾಲತ್ ಮಾಡುತ್ತೇನೆ. ಆ ಸಂದರ್ಭದಲ್ಲಿ ನಾನು ಈ ಮೊದಲೇ ಕೊಟ್ಟ ಪತ್ರಗಳ ಬಗ್ಗೆಯೂ ಚರ್ಚಿಸಿ, ಕೆಲಸವನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಕಳೆದ ಸರ್ಕಾರದಲ್ಲಿ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷರ ಅಧಿಕಾರವಧಿ 5 ವರ್ಷಕ್ಕೆ ಹಾಗೂ ಮೀಸಲಾತಿಯನ್ನು 10 ವರ್ಷಕ್ಕೆ ಬದಲಾವಣೆ ಮಾಡುವ ನಿಯಮವನ್ನು ತರಲಾಗಿತ್ತು. ಆದರೆ, ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಅದನ್ನು ಬದಲಾಯಿಸಿ, ಅಧಿಕಾರಾವಧಿಯನ್ನು ತಲಾ ಎರಡೂವರೆ ವರ್ಷ ಹಾಗೂ ಮೀಸಲಾತಿಯನ್ನು 5 ವರ್ಷಕ್ಕೆ ನಿಗದಿಪಡಿಸಿದ್ದಾರೆ ಎಂದರು.
ನಾವು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದ ರೈತರಿಗೆ ಈಗ ತಮ್ಮ ಬೆಳೆಯನ್ನು ರಾಜ್ಯದ ಎಲ್ಲಿಬೇಕಾದರೂ ಮಾರಾಟ ಮಾಡುವ ಅಧಿಕಾರವನ್ನು ನೀಡಿದಂತಾಗಿದೆ. ಜೊತೆಗೆ ಎಪಿಎಂಸಿ ಪರವಾನಗಿ ಹೊಂದಿ ಬೇರೆಡೆ ಮಾರಾಟ ಮಾಡಿದರೆ ದಂಡ ವಿಧಿಸುವುದಲ್ಲದೆ, ಪರವಾನಗಿಯನ್ನೇ ರದ್ದುಪಡಿಸಲಾಗುತ್ತಿತ್ತು. ಈಗ ನಮ್ಮ ಸರ್ಕಾರ ಈ ಕಾನೂನು ತೊಡಕನ್ನು ನಿವಾರಿಸಿದೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಸಹ ರೈತರಿಗೆ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲಗಳು ಆಗುತ್ತಿದೆ ಎಂದರು.
ದಸರಾಕ್ಕೆ ಸಂಬಂಧಿಸಿದಂತೆ ಲೆಕ್ಕ ಕೊಡುವುದಿಲ್ಲ ಎಂಬ ಆರೋಪ ಪ್ರತಿವರ್ಷ ಕೇಳಿ ಬರುತ್ತಿತ್ತು. ಹಾಗಾಗಿ ದಸರಾ ಮುಗಿದ ತಕ್ಷಣ ಲೆಕ್ಕ ಕೊಟ್ಟಿದ್ದೇವೆ. ಒಂದೂವರೆ ಕೋಟಿಯಲ್ಲಿ 10 ದಿನ ದಸರಾವನ್ನು ಸರಳವಾಗಿ ಆಚರಣೆ ಮಾಡಿ ತೋರಿಸಲಾಗಿದೆ. ಒಟ್ಟಾರೆಯಾಗಿ 7.8 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದು ತಿಳಿಸಿದರು.
ಕಾರ್ಯಕರ್ತರ ಬೆನ್ನಿಗೆ ಪಕ್ಷ ಹಾಗೂ ಉಸ್ತುವಾರಿ ಸಚಿವರಾಗಿ ತಾವು ಬೆಂಬಲವಾಗಿ ನಿಲ್ಲುವುದಲ್ಲದೆ, ಕಾನೂನುಬದ್ಧವಾದ ಎಲ್ಲ ರೀತಿಯ ಕೆಲಸಗಳನ್ನು ಮಾಡಿಕೊಡುತ್ತೇನೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಮುಂದಿನ ತಾಲೂಕು, ಜಿಲ್ಲಾ ಮಟ್ಟದ ಚುನಾವಣೆಗಳಲ್ಲಿಯೂ ಗೆಲುವಿನ ಚುಕ್ಕಾಣಿಯನ್ನು ಹಿಡಿಯಬೇಕು ಎಂದರು.