ಮೈಸೂರು: ಸಿದ್ದರಾಮಯ್ಯ ಆಗಾಗ ಟ್ವೀಟ್ ಮಾಡದಿದ್ದರೆ ಕಾಂಗ್ರೆಸ್‌ನವರೇ ಅವರನ್ನು ಮರೆತು ಬಿಡುತ್ತಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷವನ್ನು ಲೇವಡಿ ಮಾಡಿದ್ದಾರೆ. ನಾನು ವಿರೋಧ ಪಕ್ಷದ ನಾಯಕ ಎಂದು ತೋರಿಸಿಕೊಳ್ಳಲು ಟ್ವೀಟ್ ಮಾಡುತ್ತಾರೆ ಎಂದು ಸಿದ್ದರಾಮಯ್ಯರ ಕಾಲೆಳೆದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಿದ್ದರಾಮಯ್ಯಗೆ ಭಯವಿದೆ. ತನ್ನನ್ನು ಪಕ್ಷದವರೇ ಮರೆಯುತ್ತಾರೆ ಅನ್ನೋ ಭಯ ಸಿದ್ದರಾಮಯ್ಯರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ಸಿದ್ದು ಸರಣಿ ಟ್ವೀಟ್ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ನ ನಿದ್ದೆಯಿಂದ ಎದ್ದೇಳು ಸರ್ಕಾರ ಅಭಿಯಾನಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಡಿಯೂರಪ್ಪ, ಸಿದ್ದರಾಮಯ್ಯ ದಿನಚರಿ ಜನರ ಮುಂದಿಡೋಣ. 5 ವರ್ಷದಲ್ಲಿ ಸಿದ್ದರಾಮಯ್ಯ ಮಾಡಿದ್ದು ಏನು.?, ಯಡಿಯೂರಪ್ಪ ಕೋವಿಡ್ ಕಾಲದಲ್ಲಿ ಮಾಡುತ್ತಿರುವುದು ಏನು?, ಯಾರೋ ಬಂದು ತಿವಿದಾಗ ಟ್ವೀಟ್ ಮಾಡುವುದು ಅವರ ಕೆಲಸವಾಗಿದೆ ಎಂದು ಲೇವಡಿ ಮಾಡಿದರು.
ಬರೀ ಟ್ವೀಟ್ ಮಾಡುವುದು ಮಾತ್ರ ವಿರೋಧ ಪಕ್ಷದ ಕೆಲಸವಲ್ಲ. ಸಿದ್ದರಾಮಯ್ಯ ಎಲ್ಲಿ ಟೂರ್ ಮಾಡಿದ್ದಾರೆ? ಟ್ಬೀಟ್ ಮಾಡುವುದಕ್ಕೆ ವಿರೋಧ ಪಕ್ಷದ ನಾಯಕರಿಗೆ ಸರ್ಕಾರ ಸವಲತ್ತು ಕೊಡಬೇಕಾ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳಿಗೆ ಡ್ರಗ್ಸ್ ಸಜರಬಾರಾಜು ಆರೋಪ ಕುರಿತು ಪ್ರತಿಕ್ರಿಯಿಸಿ, ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಬೆಂಗಳೂರಿನಲ್ಲಿ ಪೊಲೀಸರು ತನಿಖೆ ಶುರು ಮಾಡಿದ ದಿನದಿಂದಲೇ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಯುತ್ತಿದೆ. ಮೈಸೂರಿನಲ್ಲೂ ಪೊಲೀಸರು ಡ್ರಗ್ಸ್ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದರೆ ಚೆಕ್ ಮಾಡಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.