ಮೈಸೂರು : ಜಿಲ್ಲಾಧಿಕಾರಿ ವರ್ಗಾವಣೆ ನನ್ನ ಗಮನಕ್ಕೆ ಬಂದೇ ವರ್ಗಾವಣೆ ಆಗಿದೆ. ನನ್ನ ಗಮನಕ್ಕೆ ಬಾರದೇ ವರ್ಗಾವಣೆ ಮಾಡಿಲ್ಲ ಸರ್ಕಾರ ಆದೇಶವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಇಂದು ಅರಮನೆಗೆ ಗಜಪಡೆ ಸ್ವಾಗತ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆ ಮಾಡಿ ಆ ಜಾಗಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಸರ್ಕಾರ ಯಾವ ಅಧಿಕಾರಿಗಳನ್ನು ಹಾಕಲಿ ಅವರ ಜೊತೆ ಸಹಕಾರ ನೀಡಿ ಕೆಲಸ ಮಾಡಬೇಕು. ಸರ್ಕಾರದ ಆದೇಶವನ್ನು ಜನಪ್ರತಿನಿಧಿಗಳು ಸ್ವಾಗತಿಸಬೇಕು. ಅದನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಜಿಲ್ಲಾಧಿಕಾರಿ ವರ್ಗಾವಣೆಯನ್ನು ನಾವು ಒಪ್ಪಿಕೊಂಡಿದ್ದೇವೆ. ಮುಖ್ಯಮಂತ್ರಿಗಳು ವರ್ಗಾವಣೆ ಮಾಡಿದ್ದು, ಸರ್ಕಾರದ ಆದೇಶವನ್ನು ಧಿಕ್ಕಾರ ಮಾಡುವಂತಿಲ್ಲ ಎಂದು ಹೇಳಿದರು.
ಇನ್ನು ವರ್ಗಾವಣೆಯಾಗಿರುವ ಬಿ.ಶರತ್ ಸಿಎಟಿ ಮೊರೆ ಹೋಗಿದ್ದು , ಅವರನ್ನು ಮನವೊಲಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕೋವಿಡ್ ನಿಯಮ ಪಾಲಿಸಿ :
ಮೊದಲ ಬಾರಿಗೆ ಮೈಸೂರು ಉಸ್ತುವಾರಿ ಸಚಿವನಾಗಿ ದಸರಾ ಆಚರಣೆಯಲ್ಲಿ ಭಾಗವಹಿಸುತ್ತಿರುವುದು ಬಹಳ ಸಂತೋಷವಾಗಿದೆ. ದಸರಾಗೆ ಭಾಗವಹಿಸುವವರು ಮಾಸ್ಕ್ , ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ ಸಚಿವರು, ದಸರಾ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ 1000 ಜನ, ಜಂಬೂಸವಾರಿಗೆ 2000 ಜನ, ದಸರಾ ಉದ್ಘಾಟನೆಗೆ 250 ಜನರಿಗೆ ಅವಕಾಶ ನೀಡಬೇಕು ಎಂದು ಮುಖ್ಯಕಾರ್ಯದರ್ಶಿಯವರಿಗೆ ಮನವಿ ಮಾಡಲಾಗಿದೆ.
ಇನ್ನು ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದ್ದು, ದಸರಾ ಉದ್ಘಾಟಕರು ಯಾರು ಎಂಬುದು ಒಂದೆರಡು ದಿನಗಳಲ್ಲಿ ಅಂತಿಮವಾಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.