ಮೈಸೂರು : ಹಾಟ್ಸ್ಪಾಟ್ ಸ್ಥಳಗಳಲ್ಲಿ ನಿತ್ಯ ವೈದ್ಯಕೀಯ ತಪಾಸಣೆ ಹಾಗೂ ಇತರ ವೈದ್ಯಕೀಯ ಸೌಲಭ್ಯಗಳನ್ನು ಪೂರೈಸಲು ಮೈಸೂರು ಮಹಾನಗರ ಪಾಲಿಕೆ ಮೊಬೈಲ್ ಕ್ಲಿನಿಕ್ ಆರಂಭಿಸಿದೆ.
'ನಿಮ್ಮ ಮನೆ ಬಾಗಿಲಿಗೆ ವೈದ್ಯರು' ಎಂಬ ಉದ್ದೇಶದಿಂದ ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ. ನಗರಪಾಲಿಕೆಯ ಮಂಡಕಳ್ಳಿ, ರಮಾಬಾಯಿನಗರ, ಗುಂಡೂರಾವ್ ನಗರ, ಗೋಕುಲ್ 2ನೇ ಹಂತ, ಪೌರಕಾರ್ಮಿಕರ ಕಾಲೋನಿ, ಗಿರಿಯ ಭೋವಿಪಾಳ್ಯ, ಬಸವನಗುಡಿ, ಹೆಬ್ಬಾಳ, ಮಂಚೇಗೌಡನ ಕೊಪ್ಪಲು ,ಕೈಲಸಪುರಂ, ಕುರಿಮಂಡಿ, ಹೈವೇ ಸರ್ಕಲ್ ಈ 10 ಸ್ಥಳಗಳಲ್ಲಿ ತಪಾಸಣೆ ಮಾಡಲಾಗುವುದು, ಜೊತೆಗೆ ಹಾಟ್ಸ್ಪಾಟ್ನಿಂದ ಸೀಲ್ಡೌನ್ ಆಗಿರುವ ಪ್ರದೇಶಗಳಿಗೆ ತೆರಳಿ ಇತರ ರೋಗಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು.
ಮೊಬೈಲ್ ಕ್ಲಿನಿಕ್ ಗೆ ಸಚಿವ ಎಸ್. ಟಿ. ಸೋಮಶೇಖರ್ ಅವರು ಇಂದು ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ನಂಜನಗೂಡು ಬಿಟ್ಟು ಉಳಿದ ತಾಲೂಕುಗಳಿಗೆ ಸಡಿಲಿಕೆ ನೀಡಬೇಕು ಅಥವಾ ಬೇಡವೇ ಎಂಬುದರ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಕೊರೊನ ಮುಕ್ತ ಆಗುವವರೆಗೂ ಮೈಸೂರು ಸಡಲಿಕೆ ನೀಡುವುದು ಬೇಡವೆಂದು ಹಲವು ಸಂಸ್ಥೆಗಳು ಪರ-ವಿರೋಧ ಮಾಹಿತಿ ನೀಡಿವೆ. ಇದರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.