ಮೈಸೂರು: ಜಿಲ್ಲೆಯನ್ನು ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದ್ದು, ಮೆಡಿಕಲ್ ಶಾಪ್, ತುರ್ತು ಪರಿಸ್ಥಿತಿ ಓಡಾಟಕ್ಕೆ ಅನುಮತಿ ಕೊಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,ಕೃಷಿ ಚಟುವಟಿಕೆಗಳಿಗೆ ಈಗಾಗಲೇ ಅನುಮತಿ ಕೊಡಲಾಗಿದೆ. ಉಳಿದಂತೆ ಈ ಹಿಂದಿನ ಕ್ರಮವೆ ಜಿಲ್ಲೆಯಲ್ಲಿ ಮುಂದುವರಿಯುತ್ತದೆ. ಐಟಿ,ಬಿಟಿಗೆ ಅಗತ್ಯವಿರುವಷ್ಟು ಮಾತ್ರ ಅನುಮತಿ ಕೊಡಲಾಗಿದ್ದು, ಪರಿಸ್ಥಿತಿ ನೋಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಕಟ್ಟಡ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಕಟ್ಟಡ ಕಾರ್ಮಿಕರು ಜಿಲ್ಲೆಯವರಾಗಿದ್ದರೇ, ಅಂತವರಿಗೆ ಕೆಲಸ ಮಾಡಲು ಅವಕಾಶವಿದೆ. ಹೊರ ಜಿಲ್ಲೆ ,ರಾಜ್ಯಗಳಿಂದ ಬಂದು ಕೆಲಸ ಮಾಡಲು ಯಾವುದೇ ಅನುಮತಿ ಇಲ್ಲ. ಪ್ಲಂಬರ್, ಎಲೆಕ್ಟ್ರಿಕ್ ಕೆಲಸಗಳಿಗೆ ಪೊಲೀಸ್ ಅನುಮತಿ ಅವಶ್ಯಕವಾಗಿದೆ. ಉಳಿದಂತೆ ಮೇ.0 3ರವರೆಗೂ ಲಾಕ್ಡೌನ್ ಮುಂದುವರೆಯಲಿದೆ ಎಂದು ತಿಳಿಸಿದರು.
ಇನ್ನು ರೈತರು ತಮ್ಮ ಹಳೇ ಸಾಲವನ್ನು ತೀರಿಸುವ ಸಲುವಾಗಿ ಸುಸ್ತಿ ಮನ್ನಾ ಮಾಡಲಾಗುವುದು. ಇದಕ್ಕೆ ಮಾರ್ಚ್. 31ರವರೆಗೆ ಗಡುವು ನೀಡಲಾಗಿತ್ತು. ಆದರೆ ಈ ಗಡುವನ್ನು ಮೂರು ತಿಂಗಳ ಅವಧಿಗೆ ವಿಸ್ತರಿಸಲಾಗುವುದು. ಇದರಿಂದ ಸರ್ಕಾರಕ್ಕೆ 14 ಕೋಟಿ ರೂ. ಬಡ್ಡಿ ಹೊರೆ ಬರುತ್ತದೆ. ಅದನ್ನು ನಾವೇ ಭರಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ತಿಳಿಸಿದರು.
ಇನ್ನು ನಾಗರಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಜನರಿಗೆ ಮನವಿ ಮಾಡಿದರು.
ಬಡವರಿಗೆ ಆಹಾರ ಕಿಟ್ ವಿತರಿಸಿದ ಸಚಿವ:
ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ವಿವೇಕ ಸ್ಮಾರಕದ ಆವರಣದಲ್ಲಿ ಬಡವರಿಗೆ, ಆಹಾರದ ಕಿಟ್ ಬಡವರಿಗೆ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಿದ ಸಚಿವರು, ಬಡಜನರಿಗೆ ಆಹಾರದ ಕಿಟ್ ವಿತರಣೆ ಮಾಡಿದರು. ಬಳಿಕ ಆಶ್ರಮದ ಮುಕ್ತಿದಾನಂದ ಜಿ ಸ್ವಾಮೀಜಿಗಳ ಈ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.