ಮೈಸೂರು: ಇಂತಹ ಪರಿಸ್ಥಿತಿಯಲ್ಲಿ ಮಂತ್ರಿ ಮಂಡಲ ಇರಬೇಕಿತ್ತು. ಆದರೂ ಅನಿರೀಕ್ಷಿತವಾಗಿ ಆದ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದು ಎಲ್ಲವನ್ನೂ ನಿಭಾಯಿಸುತ್ತಿದ್ದಾರೆ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಇಂದು ಅವರ ಸ್ವ ಗೃಹದಲ್ಲಿ ಈ ಟಿವಿ ಭಾರತ ಜೊತೆ ಮಾತನಾಡಿದ ಅವರು, ನಿನ್ನೆ ಹೆಚ್ ಡಿ ಕೋಟೆ ಪ್ರವಾಹ ಉಂಟಾದ ಸ್ಥಳಕ್ಕೆ ಹೋಗಿದ್ದೆ. ಇಂದು ನಂಜನಗೂಡಿಗೆ ಹೋಗುತ್ತಿದ್ದೇನೆ. ಕೊಳ್ಳೇಗಾಲದಲ್ಲಿ ಅತಿ ಹೆಚ್ಚು ನೀರು ಹರಿದಿದ್ದರಿಂದ ಹಾನಿ ಹೆಚ್ಚಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಮುಂದೆ ಪರಿಹಾರ ಕೊಡಿಸುತ್ತೇವೆ ಎಂದರು. ನೆರೆ ಪರಿಹಾರದ ಬಗ್ಗೆ ಕೇಂದ್ರದ ನೆರವು ಕೇಳುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರವು ನೇರವಾಗಿ ನಮಗೆ ಪರಿಹಾರ ಕೊಡುವುದಿಲ್ಲ, ರಾಜ್ಯ ಸರ್ಕಾರಕ್ಕೆ ಕೇಂದ್ರ ಪರಿಹಾರ ಕೊಡುತ್ತದೆ. ಅಲ್ಲಿಂದ ನಮಗೆ ಪರಿಹಾರ ಕೊಡುತ್ತಾರೆ ಎಂದರು.
ಈಗ ಸಮರೋಪಾಧಿಯಲ್ಲಿ ಪರಿಹಾರ ಕಾರ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮಂತ್ರಿ ಮಂಡಲ ಇರಬೇಕಿತ್ತು. ಆದರೆ, ಇದು ಅನಿರೀಕ್ಷಿತ. ಮುಖ್ಯಮಂತ್ರಿಗಳು ಒಬ್ಬರೇ ಎಲ್ಲಾ ಕೆಲಸಗಳನ್ನೂ ಮಾಡುತ್ತಿದ್ದಾರೆ ಅನಿಸುತ್ತದೆ. ಆದ್ದರಿಂದ ಮಂತ್ರಿ ಮಂಡಲ ಇರಬೇಕಿತ್ತು ಎಂದು ನನಗೆ ಅನಿಸುತ್ತದೆ. ಯಾಕೆಂದರೆ, ನಾನು ಕಂದಾಯ ಸಚಿವನಾಗಿ ಕೆಲಸ ಮಾಡಿದ್ದೇನೆ. ಆದ್ದರಿಂದ ಅದರ ಕಷ್ಟ ಗೊತ್ತು. ಸಿಎಂ ಒಬ್ಬರೇ ರಾಜ್ಯದ ಎಲ್ಲಾ ಕಡೆ ಭೇಟಿ ಕೊಟ್ಟು ಪರಿಹಾರ ಘೋಷಣೆ ಮಾಡುತ್ತಿದ್ದಾರೆ. ನಾವೂ ಕೂಡ ನಮ್ಮ ಕ್ಷೇತ್ರದಲ್ಲಿ ಉಂಟಾದ ಪ್ರವಾಹದ ಸಂತ್ರಸ್ತರಿಗೆ ಸ್ಪಂದಿಸುತ್ತೇವೆ ಎಂದರು.
ಶಾಸಕ ಜಿ ಟಿ ದೇವೇಗೌಡ ಬಿಜೆಪಿ ಸೇರುವ ಬಗ್ಗೆ ಮಾತುಕತೆ ನಡೆದಿದೆಯೇ? ಎಂಬ ಪ್ರಶ್ನೆಗೆ ಈಗ ರಾಜಕೀಯ ಬೇಡ. ನಮ್ಮ ಮುಂದಿರುವುದು ಪ್ರವಾಹದಿಂದ ಕಷ್ಟದಲ್ಲಿ ಸಿಲುಕಿರುವ ಜನರಿಗೆ ಸ್ಪಂದಿಸುವುದು ಅಷ್ಟೇ ಎಂದು ಸಂಸದ ಹಾಗೂ ರಾಜ್ಯ ಬಿಜೆಪಿಯ ಹಿರಿಯ ಉಪಾಧ್ಯಕ್ಷರಾದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.